ಕೂಲಿ ನೀಡಲು ವಿಳಂಬ ನರೇಗಾ ಕಾರ್ಮಿಕರಿಂದ ಪತ್ರ ಚಳವಳಿ

KannadaprabhaNewsNetwork | Published : Mar 25, 2025 12:47 AM

ಸಾರಾಂಶ

ಫೆಬ್ರವರಿ, ಮಾರ್ಚ್ ತಿಂಗಳಿಂದ ನರೇಗಾ ಕೂಲಿಕಾರರಿಗೆ ಹಣ ನೀಡುತ್ತಿಲ್ಲ. ಇದರಿಂದ ಕೂಲಿಯನ್ನೇ ನಂಬಿ ಹೊಟ್ಟೆ ಹೊರೆಯುವ ನೂರಾರು ಕುಟುಂಬಗಳು ತೀವ್ರ ತೊಂದರೆಗೆ ಸಿಲುಕಿ ಸಾಲಕ್ಕೆ ಕೈ ಚಾಚುವಂತಾಗಿದೆ.

ಬ್ಯಾಡಗಿ: ನರೇಗಾ ಯೋಜನೆಯಲ್ಲಿ ಕೂಲಿಕಾರರಿಗೆ ಕೂಲಿ ನೀಡಲು ಅಧಿಕಾರಿಗಳು ಹಾಗೂ ಎಂಜಿನಿಯರ್ ನಿರ್ಲಕ್ಷ್ಯದಿಂದ ವಿಳಂಬವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಘಾಳಪೂಜಿ, ಚಿಕ್ಕಬಾಸೂರು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಕೂಲಿ ಕಾರ್ಮಿಕರು ಪತ್ರ ಚಳವಳಿ ನಡೆಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕರ‍್ಯಕರ್ತರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ‍್ಯಾಲಯಕ್ಕೆ ವಿವಿಧ ಗ್ರಾಮ ಪಂಚಾಯಿತಿಗಳ ನೂರಾರು ಕೂಲಿಕಾರರು ಪತ್ರ ಬರೆದು ಬಾಕಿ ಉಳಿದ ಕೂಲಿ ಮೊತ್ತವನ್ನು ಖಾತೆಗಳಿಗೆ ಜಮೆ ಮಾಡುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ರಾಜು ಆಲದಹಳ್ಳಿ, ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಕೂಲಿ ಕೆಲಸ ನಿರ್ವಹಿಸಲು ಹೆಸರು ನೋಂದಾಯಿಸಿ ಜಾಬ್ ಕಾರ್ಡ್ ಪಡೆದಿದ್ದಾರೆ. ಆದರೆ ಫೆಬ್ರವರಿ, ಮಾರ್ಚ್ ತಿಂಗಳಿಂದ ಕೂಲಿಕಾರರಿಗೆ ಹಣ ನೀಡುತ್ತಿಲ್ಲ. ಇದರಿಂದ ಕೂಲಿಯನ್ನೇ ನಂಬಿ ಹೊಟ್ಟೆ ಹೊರೆಯುವ ನೂರಾರು ಕುಟುಂಬಗಳು ತೀವ್ರ ತೊಂದರೆಗೆ ಸಿಲುಕಿ ಸಾಲಕ್ಕೆ ಕೈ ಚಾಚುವಂತಾಗಿದೆ.

ಸ್ಥಳೀಯ ಪಿಡಿಒ ಹಾಗೂ ಎಂಜಿನಿಯರ್ ರಾಜ್ಯ ಹಾಗೂ ಕೇಂದ್ರ ಸರ್ಕಾರದತ್ತ ಕೈತೋರಿಸುತ್ತ, ನಾವೇನು ಮಾಡಕ್ಕಾಗಲ್ಲರಿ, ಪಂಚಾಯಿತಿಯಿಂದ ಕೆಲಸ ಮಾಡಿದ ಕುರಿತು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದೇವೆ, ಹಣ ಬಿಡುಗಡೆ ಮಾಡುವುದು ನಮ್ಮ ಜವಾಬ್ದಾರಿ ಅಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ಕೂಲಿಕಾರರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಯ ಕೆರೆ ಕಟ್ಟೆ, ಹೊಲಗದ್ದೆಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಣ ಕೇಳಲು ಸಾಧ್ಯವಾಗತ್ತಾ ಎಂದು ಪ್ರಶ್ನಿಸಿದದರು.ಪಂಚಾಯಿತಿ ಮುತ್ತಿಗೆ: ಕಾರ್ಮಿಕ ಮುಖಂಡ ಸೋಮಶೇಖರ ಕಜ್ಜೇರ ಮಾತನಾಡಿ, ಒಂದೂವರೆ ತಿಂಗಳಿನಿಂದ ಕೂಲಿ ಹಣ ಬಾರದೇ ಕಂಗಾಲಾಗಿರುವ ಕೂಲಿಕಾರರು ಬೇರೆ ಬೇರೆ ಕಡೆಗೆ ಗುಳೆ ಹೋಗಲು ಸಿದ್ಧರಾಗಿದ್ದಾರೆ. ಕೆಲವರು ಕೂಲಿ ಮಾಡಿದ ಹಣ ಬಾರದೇ ದಿನಸಿ ಸಾಮಗ್ರಿ, ಇತ್ಯಾದಿಗಳನ್ನು ತಂದಿದ್ದು, ಅಂಗಡಿಯವರು ಕಾಟಕ್ಕೆ ಬೇಸತ್ತಿದ್ದಾರೆ. ಈ ಕುರಿತು ತಾಪಂ ಇಒ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ. ವಾರದೊಳಗೆ ಕೂಲಿ ಹಣ ಜಮೆಯಾಗದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವ ಕುರಿತು ನಿರ್ಧರಿಸುವುದಾಗಿ ಎಚ್ಚರಿಸಿದರು.

ಈ ವೇಳೆ ಚಂದ್ರಶೇಖರ ಕಜ್ಜೇರ, ವಿ. ಪುಟ್ಟಪ್ಪ ರಮೇಶ ಮುತ್ಕರಿ, ಮೌನೇಶ ಚಿಕ್ಕೇರಿ, ಎ. ರಾಜು ಪ್ರಕಾಶ ಕಳ್ಳಿಮನಿ ಇದ್ದರು.ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲಿ

ರಾಣಿಬೆನ್ನೂರು: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಲಕ್ಷ್ಮೀ ಬಲ್ಲೂರ ತಿಳಿಸಿದರು.ನಗರದ ರೋಟರಿ ಶಾಲೆಯಲ್ಲಿ ಸ್ಥಳೀಯ ಇನ್ನರ್‌ವ್ಹೀಲ್ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದಾ ಕ್ರಿಯಾಶೀಲತೆಯಿಂದಿರುವ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಅಭ್ಯುದಯಕ್ಕೆ ಕೈಜೋಡಿಸಬೇಕು ಎಂದರು.ದಿನಾಚರಣೆ ಅಂಗವಾಗಿ ಇನ್ನರ್‌ವ್ಹೀಲ್ ಸಂಸ್ಥೆ ಸದಸ್ಯರಿಗೆ 5 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಮೂವರಿಗೆ ಇನ್ನರ್‌ವ್ಹೀಲ್ ಕ್ಲಬ್ ಆದರ್ಶ ಮಹಿಳೆ ಎಂಬ ಬಿರುದನ್ನು ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಏಳು ಸಾಧಕಿಯರನ್ನು ಸನ್ಮಾನಿಸಲಾಯಿತು.ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಂಜನಾ ಕುರವತ್ತಿ, ಕಾರ್ಯದರ್ಶಿ ಪ್ರಮೀಳಾ ಜಂಬಗಿ, ಭಾರತಿ ಜಂಬಗಿ, ವಿದ್ಯಾ ಶೆಟ್ಟಿ, ಮೀನಾ ಗುಪ್ತಾ, ಆಶಾ ಅಗರವಾಲ್, ಪುಷ್ಪಾ, ಮಂಗಳಗೌರಿ, ಸುನೀತಾ ಗುಪ್ತಾ, ನಿತಾ ಮಿರ್ಜಿ, ಡಾ. ನಳಿನಾ, ಪೂಜಾ, ಪ್ರಿಯಾ, ಡಾ. ವಿದ್ಯಾ ಮತ್ತಿತರರಿದ್ದರು.

Share this article