ಧರೆಗುರುಳಿದ ವಿದ್ಯುತ್‌ ಕಂಬಗಳು, ತಲೆಕೆಳಗಾದ ಬಾಳೆ

KannadaprabhaNewsNetwork | Published : Mar 25, 2025 12:47 AM

ಸಾರಾಂಶ

ತಾಲೂಕಿನ ಹಲವೆಡೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಮರಗಿಡಗಳು, ವಿದ್ಯುತ್‌ ಕಂಬಗಳು ಮನೆಯ ಹೆಂಚುಗಳು ಧರೆಗುರುಳಿವೆ. ಈ ಮಧ್ಯೆ ಸುಡು ಬಿಸಿಲಿನಿಂದ ತತ್ತರಗೊಂಡಿದ್ದ ಜನರಿಗೆ ಮತ್ತು ರೈತರಿಗೆ ಸುರಿದ ಮಳೆಗೆ ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಹಲವೆಡೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಮರಗಿಡಗಳು, ವಿದ್ಯುತ್‌ ಕಂಬಗಳು ಮನೆಯ ಹೆಂಚುಗಳು ಧರೆಗುರುಳಿವೆ. ಈ ಮಧ್ಯೆ ಸುಡು ಬಿಸಿಲಿನಿಂದ ತತ್ತರಗೊಂಡಿದ್ದ ಜನರಿಗೆ ಮತ್ತು ರೈತರಿಗೆ ಸುರಿದ ಮಳೆಗೆ ಸಂತಸ ತಂದಿದೆ. ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ, ದೊಂಬರನಹಳ್ಳಿ ಗೊಲ್ಲರಹಟ್ಟಿ, ಅಕ್ಕಳಸಂದ್ರ ಗೊಲ್ಲರಹಟ್ಟಿ, ಅಕ್ಕಳಸಂದ್ರ, ತೋವಿನಕೆರೆ, ಹರಿಕಾರನಹಳ್ಳಿ, ಸೊಪ್ಪನಹಳ್ಳಿ, ಕೊಂಡಜ್ಜಿ ಕ್ರಾಸ್, ಹಟ್ಟಿಹಳ್ಳಿ, ಹಾಲದೇವರಹಟ್ಟಿ, ಕುರುಬರಹಳ್ಳಿ ಬ್ಯಾಲಾ, ಸಂಪಿಗೆ ಹೊಸಹಳ್ಳಿ, ಆಯರಹಳ್ಳಿ, ಸಂಪಿಗೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಅದೇ ರೀತಿ ಮಾಯಸಂದ್ರ, ತುರುವೇಕೆರೆ ಪಟ್ಟಣ, ದಂಡಿನಶಿವರ ಮತ್ತು ದಬ್ಬೇಘಟ್ಟ ಗ್ರಾಮದ ಆಸುಪಾಸು ಸಾಧಾರಣ ಮಳೆಯಾಗಿದೆ. ರಾತ್ರಿ ಬೀಸಿದ ಬಿರುಗಾಳಿಗೆ ಶ್ರೀರಂಗಪಟ್ಟಣ-ಬೀದರ್ 150 ಎ ರಾಷ್ಟ್ರೀಯ ಹೆದ್ದಾರಿ ಬಾಣಸಂದ್ರ ಕಾಲೋನಿ ಬಳಿಯ ರಸ್ತೆ ಮೇಲೆ ಹಾಗು ವಿದ್ಯುತ್ ಕಂಬದ ಮೇಲೆ ಬೃಹತ್ ಗ್ರಾತ್ರದ ಮರದ ಕೊಂಬೆ ಮುರಿದು ಬಿದ್ದು ಕೆಲ ಗಂಟೆಯವರೆಗೆ ವಾಹನ ಸಂಚಾರ ತೊಂದರೆಯಾಯಿತು. ಮರದ ಕೊಂಬೆ ಬಿದ್ದು 4 ವಿದ್ಯುತ್ ಕಂಬಗಳು ಮುರಿದಿದ್ದು ನಿರಂತರ ಜ್ಯೋತಿಯ ವಿದ್ಯುತ ಕೇಬಲ್ ನೆಲಕ್ಕೆ ಬಿದ್ದಿದೆ.ಅದೇ ರೀತಿ ತುಯ್ಯಲಹಳ್ಳಿ 2, ಹುಲಿಕೆರೆ 2, ಮುನಿಯೂರಿನಲ್ಲಿ 3 ವಿದ್ಯುತ್ ಕಂಬಗಳು ಮುರಿದು ಲೈನ್ ತುಂಡರಿಸಿ ನಿನ್ನೆ ರಾತ್ರಿ ಕೆಲ ಗಂಟೆಯತನಕ ವಿದ್ಯುತ್ ವ್ಯತ್ಯಯವಾಗಿತ್ತು. ಹಾಗೆಯೇ ಗೋರಾಘಟ್ಟ ಗ್ರಾಮದ ನಿವಾಸಿ ಶಾರದಮ್ಮನವರ ಮನೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದವು.ಮಾಯಸಂದ್ರ ಹೋಬಳಿಯ ಅಜ್ಜನಹಳ್ಳಿಯ ಮನೆಯೊಂದರ ಮನೆಯ ಶೀಟ್ ಹಾರಿ ಹೋಗಿ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಸೀಗೇಹಳ್ಳಿಯ ಚಂದ್ರಶೇಖರ್‌ ಎಂಬ ರೈತರು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಿರುಗಾಳಿಗೆ ಸಿಲುಕಿ ತಲೆಕೆಳಕಾಗಿ ಲಕ್ಷಾಂತರ ರು. ನಷ್ಠವಾಗಿದೆ. ಪಟ್ಟಣದ ಸುಬ್ರಹ್ಮಣ್ಯ ಬಡಾವಣೆಯ ಕೆ.ಟಿ.ಶಿವಶಂಕರ್‌ ಎಂಬುವವರ ಮನೆಯ ಕಾಂಪೌಂಡ್‌ ನಲ್ಲಿದ್ದ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಒಂದು ದ್ವಿಚಕ್ರವಾಹನಕ್ಕೆ ಜಖಂ ಆಗಿದೆ. ಕಳೆದ ಎರಡು ತಿಂಗಳುಗಳಿಂದ ಬಿಸಿಲಿನ ಝಳಕ್ಕೆ ನೀರಿಲ್ಲದೆ ಹೈರಾಣಾಗಿದ್ದ ರೈತರ ತೆಂಗು, ಅಡಿಕೆ, ಬಾಳೆ ಮತ್ತು ಜಾನುವಾರು ಮೇವಿನ ಬೆಳೆಗಳಿಗೆ ಜೀವ ಕಳೆಯನ್ನು ಮಳೆ ತಂದಿದೆ.

ಹಾನಿಯಾದ ಸ್ಥಳಕ್ಕೆ ಬೆಸ್ಕಾಂ ಶಾಖಾಧಿಕಾರಿ ಸೋಮೇಖರ್, ವಾಣಿ ಮತ್ತು ಸಿಂಬ್ಬಂದಿಗಳು ಭೇಟಿ ನೀಡಿ ತೆರವು ಕಾರ್ಯಚರಣೆ ನಡೆಸಿದ್ದಾರೆ.

Share this article