ಹಿರಿಯೂರು ಮಾಜಿ ಶಾಸಕ ರಾಮಯ್ಯ ನಿಧನ

KannadaprabhaNewsNetwork |  
Published : Aug 22, 2025, 12:00 AM IST
ಚಿತ್ರ 1 | Kannada Prabha

ಸಾರಾಂಶ

ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ರಾಮಯ್ಯ(79) ಅವರು ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಿರಿಯೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ರಾಮಯ್ಯ(79) ಅವರು ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತಾಲೂಕಿನ ಮಸ್ಕಲ್ ಗ್ರಾಮದರಾಗಿದ್ದ ರಾಮಯ್ಯನವರು ಮೇ 22, 1946ರಲ್ಲಿ ಜನಿಸಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದ ಅವರು 1985ರಲ್ಲಿ ಕೆ.ಎಚ್.ರಂಗನಾಥ್ ರವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಹಿರಿಯೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ರಾಮಯ್ಯನವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗುತ್ತಾರೆ.

ರಾಮಯ್ಯನವರು 32542 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಜೆಎಸ್‌ಪಿ ಪಕ್ಷದ ಟಿ.ತಿಪ್ಪಣ್ಣ ನವರು 26468 ಮತಗಳನ್ನು ಪಡೆದು ಪರಾಭವಗೊಳ್ಳುತ್ತಾರೆ. 6074 ಮತಗಳ ಅಂತರದಿಂದ ಆರ್.ರಾಮಯ್ಯ ನವರು ಗೆಲುವು ಸಾಧಿಸಿ 1989ರವರೆಗೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಸೇವೆ ಸಲ್ಲಿಸುತ್ತಾರೆ. 2018ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಬೆಂಬಲ ಸೂಚಿಸಿದ್ದರು. ಒಂದೆರಡು ವರ್ಷಗಳ ಕಾಲ ಬಿಜೆಪಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ತದನಂತರ ಆರೋಗ್ಯ ಸರಿಯಿಲ್ಲದ ಕಾರಣ ರಾಜಕೀಯದಿಂದ ದೂರ ಉಳಿದಿದ್ದರು.

ಮಾಜಿ ಶಾಸಕರ ಪಾರ್ಥಿವ ಶರೀರವನ್ನು ಭೀಮನಬಂಡೆಯ ಅವರ ಜಮೀನಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ನಂತರ ಹೊಸ ಯಳನಾಡು ಬಳಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಜಿ ಶಾಸಕ ರಾಮಯ್ಯನವರ ನಿಧನಕ್ಕೆ ತಾಲೂಕಿನ ಎಲ್ಲಾ ಪಕ್ಷದ ಮುಖಂಡರುಗಳು ಸಂತಾಪ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ