ಮಾಂಗಲ್ಯ ಸರ ಕಳವು ಪ್ರಕರಣ ಭೇದಿಸಿದ ನಾಗಮಂಗಲ ಪೊಲೀಸರು

KannadaprabhaNewsNetwork |  
Published : Aug 22, 2025, 12:00 AM IST
21ಕೆಎಂಎನ್ ಡಿ32 | Kannada Prabha

ಸಾರಾಂಶ

ತಾಲೂಕಿನ ಕೊಣನೂರು ಗ್ರಾಮದ ಮಹಾಬಲೇಶ್ವರ ಎಂಬುವರ ಪತ್ನಿ ಸುಶೀಲಮ್ಮ ಆ.8ರಂದು ತನ್ನ ಮೈದುನ ದೇವೇಗೌಡರೊಂದಿಗೆ ಟಿವಿಎಸ್ ಮೊಪೆಡ್‌ನಲ್ಲಿ ಚಿಣ್ಯ ಗಂಗವಾಡಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮೂವರು ಸ್ಕೂಟರ್ ಅಡ್ಡಗಟ್ಟಿ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತೊಯ್ದಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಿಳೆಯರನ್ನು ಅಡ್ಡಗಟ್ಟಿ ಚಿನ್ನದ ಮಾಂಗಲ್ಯ ಸರ ಕಳವು ಮಾಡಿದ ಪ್ರಕರಣವನ್ನು ಬೇಧಿಸಿರುವ ನಾಗಮಂಗಲ ವೃತ್ತದ ಪೊಲೀಸರು 15.70 ಲಕ್ಷ ರು. ಮೌಲ್ಯದ 100 ಗ್ರಾಂ ತೂಕದ ಮೂರು ಚಿನ್ನದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು ಟಿವಿಎಸ್ ಎಂಟಾರ್ಕ್ ಸ್ಕೂಟರ್ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಮೂಲದ ಬೆಂಗಳೂರಿನ ಶ್ರೀನಗರದ ಕಾಳಪ್ಪ ಬ್ಲಾಕ್ ನಿವಾಸಿ ಸ್ವಾಮಿ ಎಂಬುವರ ಮಗ ಎಸ್.ಕುಮಾರ್ ಅಲಿಯಾಸ್ ಕಸ್ಟಡಿ(26) ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಂತೆಮೊಗೇನಹಳ್ಳಿ ವಾಸಿ ತಮ್ಮಣ್ಣನ ಪುತ್ರ ನಾಗರಾಜ ಅಲಿಯಾಸ್ ಸತ್ತಾರ್(27) ಮತ್ತು ಕನಕಪುರ ತಾಲೂಕಿನ ಹೊಸದೊಡ್ಡಿ ಮೂಲದ ರಾಮನಗರ ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಮುಂಭಾಗದ ವಾಸಿ ಬಸವರಾಜು ಮಗ ನರಸಿಂಹ ಬಂಧಿತ ಆರೋಪಿಗಳು.

ತಾಲೂಕಿನ ಕೊಣನೂರು ಗ್ರಾಮದ ಮಹಾಬಲೇಶ್ವರ ಎಂಬುವರ ಪತ್ನಿ ಸುಶೀಲಮ್ಮ ಆ.8ರಂದು ತನ್ನ ಮೈದುನ ದೇವೇಗೌಡರೊಂದಿಗೆ ಟಿವಿಎಸ್ ಮೊಪೆಡ್‌ನಲ್ಲಿ ಚಿಣ್ಯ ಗಂಗವಾಡಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮೂವರು ಸ್ಕೂಟರ್ ಅಡ್ಡಗಟ್ಟಿ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತೊಯ್ದಿದ್ದರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಶೀಲಮ್ಮ ದೂರು ದಾಖಲಿಸಿದ್ದರು.

ಪ್ರಕರಣದ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನಿರ್ದೇಶನದಂತೆ ಎಎಸ್‌ಪಿಗಳಾದ ಈ.ಸಿ.ತಿಮ್ಮಯ್ಯ, ಎಸ್.ಸಿ.ಗಂಗಾಧರಸ್ವಾಮಿ, ನಾಗಮಂಗಲ ಡಿವೈಎಸ್‌ಪಿ ಬಿ.ಚಲುವರಾಜು ಮೇಲುಸ್ತುವಾರಿಯಲ್ಲಿ ಸಿಪಿಐ ಕೆ.ಎಸ್.ನಿರಂಜನ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಮತ್ತು ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಆ.17ರಂದು ತಾಲೂಕಿನ ದೇವಲಾಪುರ ರಸ್ತೆಯ ಅರಣ್ಯ ಪ್ರದೇಶದಲ್ಲಿ ಹಾಯ್ದು ಹೋಗಿರುವ ಮಾಗಡಿ ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ.

ಪತ್ತೆಯಾದ ಮತ್ತೆರಡು ಪ್ರಕರಣ:

ತಾಲೂಕಿನ ಪಡುವಲಪಟ್ಟಣ ಗ್ರಾಮದ ಬ್ರಹ್ಮಲಿಂಗಯ್ಯ ಪತ್ನಿ ಜಯಮ್ಮ ಆ.6ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಜಾನುವಾರುಗಳಿಗೆ ಹುಲ್ಲು ಹೊತ್ತು ತೆರಳುತ್ತಿದ್ದ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು 40ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು.

ತಾಲೂಕಿನ ಮಲ್ಲನಕೊಪ್ಪಲು ಗ್ರಾಮದ ಲೇಟ್ ನಂಜಪ್ಪ ಪತ್ನಿ ಲಕ್ಷ್ಮಮ್ಮ ಎಂಬುವರು ಜ.4ರ ಮಧ್ಯಾಹ್ನ 1ಗಂಟೆ ಸಮಯದಲ್ಲಿ ದೊಡ್ಡಚಿಕ್ಕನಹಳ್ಳಿ - ತೊರೆಮಲ್ಲನಾಯ್ಕನಹಳ್ಳಿ ಗ್ರಾಮದ ರಸ್ತೆ ಪಕ್ಕದಲ್ಲಿ ಕುಳಿತಿದ್ದ ವೇಳೆ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ 40ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಪಿಐ ಕೆ.ಎಸ್.ನಿರಂಜನ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ, ಬೆಳ್ಳೂರು ಠಾಣೆಯ ಪಿಎಸ್‌ಐ ರವಿಕುಮಾರ್, ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಕಾಮಣ್ಣನವರ್, ಮುಖ್ಯಪೇದೆಗಳಾದ ಪ್ರಶಾಂತ್‌ಕುಮಾರ್, ಇಂದ್ರಕುಮಾರ್, ಎಚ್.ಎನ್.ಮಧುಕುಮಾರ್, ಪೇದೆಗಳಾದ ಶಂಕರನಾಯಕ, ಕೆ.ಎಂ.ದಿನೇಶ, ಎಸ್.ಎಸ್. ಕಿರಣ್‌ಕುಮಾರ್, ವಿ.ಪ್ರಕಾಶ್, ಎಂ.ಸಿದ್ದಪ್ಪ, ರವಿಕಿರಣ್ ಮತ್ತು ಲೊಕೇಶ್ ಕರ್ತವ್ಯ ನಿರ್ವಹಿಸಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ