ಕನ್ನಡಪ್ರಭ ವಾರ್ತೆ ಮಳವಳ್ಳಿ
ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಭಾರತ್ ರೈಸ್, ಭಾರತ್ ದಾಲ್, ಭಾರತ್ ಗೋಧಿ, ಭಾರತ್ ಹಿಟ್ಟನ್ನು ನಮ್ಮ ರಾಜ್ಯಕ್ಕೂ ಪೂರೈಕೆ ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ಎಪಿಎಂಸಿ ಆವರಣದ ಪಡಿತರ ವಿತರಣೆ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿ, ಪಡಿತರದಾರರ ಹಾಗೂ ವಿತರಕರ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಬೆಂಗಳೂರಿನಲ್ಲಿ ಶೀಘ್ರ ರಾಷ್ಟ್ರ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುವುದು ಎಂದರು.
ಆಗಸ್ಟ್ ತಿಂಗಳ ಅಂತ್ಯದಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜಿಸಿ ಪಡಿತರದಾರರು ಹಾಗೂ ವಿತರಕರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸಹ ಪಾಲ್ಗೊಳ್ಳುತ್ತಿದ್ದಾರೆ. ಹಲವು ರಾಜ್ಯಗಳ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಭಾರತ್ ರೈಸ್, ಭಾರತ್ ದಾಲ್, ಭಾರತ್ ಗೋಧಿ, ಭಾರತ್ ಹಿಟ್ಟನ್ನು ನಮ್ಮ ರಾಜ್ಯಕ್ಕೂ ಪೂರೈಕೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 10 ಕೇಜಿ ಅಕ್ಕಿ ನೀಡಲಾಗುತ್ತಿದೆ ಜೊತೆಗೆ ವಿತರಕರಿಗೂ ಸಹ ಬೇರೆ ರಾಜ್ಯಗಳಿಗಿಂತಲೂ ಹೆಚ್ಚಿನ ಕಮಿಷನ್ ನೀಡಲಾಗುತ್ತಿದೆ. ಹಲವೆಡೆ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಎಲ್ಲರೂ ಬಯೋಮೆಟ್ರಿಕ್ ಪಡೆದ ತಕ್ಷಣ ಅಲ್ಲಿಯೇ ಪಡಿತರ ವಿತರಿಸಬೇಕು. ತಿಂಗಳ ಕೊನೆವರೆಗೂ ಅಂಗಡಿಯನ್ನು ತೆರೆಯಬೇಕು. ಕಾರ್ಡ್ ದಾರರಿಂದ ಯಾವುದೇ ಹಣ ಪಡೆಯವಂತಿಲ್ಲ, ತೂಕ ಪ್ರಮಾಣ ಸರಿಯಾಗಿರಬೇಕು ಎಂದು ಸೂಚಿಸಿದರು.ಸಗಟು ಮಳಿಗೆಗಳಲ್ಲಿ ಅಕ್ರಮ ತಡೆಗಟ್ಟಲು ಸಿಸಿಟಿವಿ ಅಳವಡಿಸಬೇಕು, ಎಲೆಕ್ಟ್ರಾನಿಕ್ ತೂಕಯಂತ್ರಗಳನ್ನು ಬಳಸಬೇಕು. ಪಡಿತರ ಸಾಗಾಣಿಕೆ ಲಾರಿಗಗಳಿಗೆ ಜಿಪಿಎಸ್ ಅಳವಡಿಸಬೇಕು. ರಾಜ್ಯ ಸರ್ಕಾರ ಹಣ ಉಳಿಸಲು ಸರ್ಕಾರ ಆಹಾರ ಕಿಟ್ ವಿತರಣೆ ಯೋಜನೆ ರೂಪಿಸಿದ್ದು, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ತಲಾ 10 ಕೇಜಿ ಅಕ್ಕಿ ವಿತರಣೆಯಲ್ಲಿ ಯಾವುದೇ ಕಡಿತವಾಗಬಾರದು ಎಂದು ಆಗ್ರಹಿಸಿದರು.
ಸರ್ಕಾರಿ ನ್ಯಾಯ ಬೆಲೆ ಅಂಗಡಿ ಎಂಬ ಸಿನಿಮಾವನ್ನು ನಿರ್ಮಿಸಲಾಗಿದೆ. ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಇದರ ಚಿತ್ರೀಕರಣ ನಡೆಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪಡಿತರದಾರರಿಗೆ ವಿತರಕರ ಕಥಾ ಚಿತ್ರಣಗಳನ್ನು ತೋರಿಸುವ ನಿಟ್ಟಿನಲ್ಲಿ ಸಿನಿಮಾ ತಯಾರಾಗಿದೆ. ಎಲ್ಲ ಪಡಿತರದಾರ ಹಾಗೂ ವಿತರಕ ಕುಟುಂಬದವರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಡಿ.ದೇವರಾಜು, ನಿರ್ದೇಶಕ ಲಿಂಗೇಗೌಡ, ಖಜಾಂಚಿ ಮಂಟೇಸ್ವಾಮಿ, ಮುಖಂಡರಾದ ಗಂಗಾಧರಮೂರ್ತಿ, ನಟರಾಜಮೂರ್ತಿ, ಸಂಜೀವ್ ಮೂರ್ತಿ ಹಾಜರಿದ್ದರು.