ರಸ್ತೆಯ ನಡುವೆ ಬೃಹತ್ ಹೊಂಡ ನಿರ್ಮಾಣವಾಗಿ ವಾರಗಳು ಕಳೆದರೂ ಗಮನಹರಿಸದ ಪುರಸಭೆ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಪುರಸಭೆ ಮಾಜಿ ಸದಸ್ಯರೊಬ್ಬರು ಹೊಂಡದಲ್ಲಿ ಮೀನು ಹಿಡಿಯುವ ಮೂಲಕ ಅಣಕಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ: ರಸ್ತೆಯ ನಡುವೆ ಬೃಹತ್ ಹೊಂಡ ನಿರ್ಮಾಣವಾಗಿ ವಾರಗಳು ಕಳೆದರೂ ಗಮನಹರಿಸದ ಪುರಸಭೆ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಪುರಸಭೆ ಮಾಜಿ ಸದಸ್ಯರೊಬ್ಬರು ಹೊಂಡದಲ್ಲಿ ಮೀನು ಹಿಡಿಯುವ ಮೂಲಕ ಅಣಕಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಕಾರ್ಕಳದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ಕಾರ್ಕಳದಿಂದ ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯ ಪುರಸಭೆ ವ್ಯಾಪ್ತಿಯ ಅನಂತಶಯನ ದೇವಸ್ಥಾನ ಸಮೀಪದ ರಸ್ತೆ ಬದಿಯಲ್ಲಿ ಈ ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ವಾಸ್ತವವಾಗಿ ಇದು ಕೇಬಲ್ ನೆಟ್‌ವರ್ಕ್ ಅಳವಡಿಕೆಗಾಗಿ ನಿರ್ಮಿಸಲಾದ ಛೇಂಬರ್ ಆಗಿದ್ದು, ಕಾಮಗಾರಿಯ ಕಳಪೆ ಗುಣಮಟ್ಟದಿಂದಾಗಿ ಸುಮಾರು 15 ದಿನಗಳ ಹಿಂದೆ ಮೇಲ್ಭಾಗ ಕುಸಿದು ಬಿದ್ದಿದೆ. ಪರಿಣಾಮವಾಗಿ ರಸ್ತೆ ಬದಿಯಲ್ಲಿ ಆಳವಾದ ಹೊಂಡ ನಿರ್ಮಾಣವಾಗಿದೆ.ಸಾರ್ವಜನಿಕರ ಆಕ್ರೋಶ: ಈ ರಸ್ತೆ ಅತ್ಯಂತ ಜನನಿಬಿಡವಾಗಿದ್ದು, ಪ್ರತಿದಿನ ಸಾವಿರಾರು ವಾಹನ ಸವಾರರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪಾಡಚಾರಿಗಳು ಸಂಚರಿಸುತ್ತಾರೆ. ಹೊಂಡವು ಬಾಯಿ ತೆರೆದುಕೊಂಡಿದ್ದು, ರಾತ್ರಿ ವೇಳೆ ವಾಹನ ಸವಾರರು ಇಲ್ಲಿ ಬಿದ್ದು ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ ಹೊಂಡದಲ್ಲಿ ನಿಂತಿರುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ.10 ದಿನಗಳ ಹಿಂದೆಯೇ ಈ ಬಗ್ಗೆ ಪುರಸಭೆ ಗಮನಕ್ಕೆ ತರಲಾಗಿತ್ತು. ಮಾಜಿ ಸದಸ್ಯ ಪ್ರಕಾಶ್ ರಾವ್ ಅವರು ಸ್ವತಃ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೂ, ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದೆ ಜಾಣ ಮೌನ ವಹಿಸಿದ್ದಕ್ಕೆ ಕೆರಳಿದ ಪ್ರಕಾಶ್ ರಾವ್ ಮೇ 29ರಂದು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಮೀನು ಹಿಡಿಯುವ ಮೂಲಕ ಅಣಕ: ಸಮಸ್ಯೆಯನ್ನು ನಿರ್ಲಕ್ಷ್ಯಿಸಿದ ಆಡಳಿತಕ್ಕೆ ಬುದ್ಧಿ ಕಲಿಸುವ ಉದ್ದೇಶದಿಂದ ಹೊಂಡದಲ್ಲಿನ ನೀರಿನಲ್ಲಿ ಬಲೆ ಹಾಕಿ ಮೀನು ಹಿಡಿಯುವ ನಾಟಕೀಯ ದೃಶ್ಯವನ್ನು ಪ್ರದರ್ಶಿಸುವ ಮೂಲಕ ಪ್ರಕಾಶ್ ರಾವ್ ಪ್ರತಿಭಟನೆ ನಡೆಸಿದರು. ರಸ್ತೆ ಹೊಂಡದಲ್ಲಿ ಮೀನು ಹಿಡಿಯುವಷ್ಟು ನಿರ್ಲಕ್ಷ್ಯ ವಹಿಸಿದ ಪುರಸಭೆಯ ಕಾರ್ಯವೈಖರಿಯನ್ನು ಸ್ಥಳೀಯರು ತೀವ್ರವಾಗಿ ಟೀಕಿಸಿದ್ದಾರೆ. ಪ್ರತಿಭಟನೆಯಲ್ಲಿ ಸ್ಥಳೀಯ ರಿಕ್ಷಾ ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.