ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸ್ನೇಹಲೋಕ ಚಲುವರಾಜು ಅವರ ಸ್ಮರಣಾರ್ಥ ಪಾಂಡವ ಪೆಟ್ ಲವರ್ಸ್ ವತಿಯಿಂದ ನಡೆದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಾರಥ್ಯದಲ್ಲಿ ಮೊದಲ ಬಾರಿಗೆ ನಡೆದ ಶ್ವಾನ ಪ್ರದರ್ಶನದಲ್ಲಿ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 35ಕ್ಕೂ ಅಧಿಕ ವಿವಿಧ ತಳಿಯ 200ಕ್ಕೂ ಹೆಚ್ಚಿನ ನಾಯಿಗಳನ್ನು ಕರೆತಂದಿದ್ದ ಮಾಲೀಕರು ಶ್ವಾನಗಳಿಗೆ ವಿವಿಧ ವಿನ್ಯಾಸದ ವಸ್ತುಗಳಿಂದ ಅಲಂಕಾರಗೊಳಿಸಿದ್ದು ಗಮನ ಸೆಳೆಯಿತು.
ತೀರ್ಪುಗಾರರಾಗಿ ಭಾಗವಹಿಸಿದ್ದ ಬೆಂಗಳೂರಿನ ವಿಶ್ವಾಸ್ ಬಸವರಾಜು ಹಾಗೂ ಶೇಖರ್ ರಾವ್ ಭಾಗವಹಿಸಿ ಶ್ವಾನಗಳ ನಡಿಗೆ, ಮುಖಭಾವ, ವಿನ್ಯಾಸ, ಕೌಶಲ್ಯತೆ ಹಾಗೂ ಸ್ವಚ್ಛತೆಯ ಕುರಿತು ವೀಕ್ಷಣೆ ಮಾಡುವ ಮೂಲಕ ಬಹುಮಾನಕ್ಕೆ ಆಯ್ಕೆ ಮಾಡಿದರು. ಉತ್ತಮ ಪ್ರದರ್ಶನ ನೀಡಿದ ಶ್ವಾನಕ್ಕೆ ಮೊದಲ ಬಹುಮಾನ 1.50 ಲಕ್ಷ ರು. ನೀಡಲಾಯಿತು. ಭಾಗವಹಿಸಿದ ಎಲ್ಲಾ ಶ್ವಾನಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಶ್ವಾನ ಪ್ರದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ 200ಕ್ಕೂ ಅಧಿಕ ಶ್ವಾನಗಳು ಭಾಗವಹಿಸಿವೆ. ನಿಯತ್ತಿಗೆ ಹೆಸರಾಗಿರುವ ಶ್ವಾನಗಳ ಪ್ರದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಶ್ವಾನ ಪ್ರಿಯರು ಶ್ವಾನಗಳನ್ನು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಆರೈಕೆ ಮಾಡುತ್ತಾರೆ. ದೇಶದ ದೊಡ್ಡ ಉದ್ಯಮಿಯಾದ ರತನ್ ಟಾಟಾ ಅವರು ಸಾವನ್ನಪ್ಪಿದ್ದ ಸಂದರ್ಭದಲ್ಲಿ ಅವರು ಸಾಕಿದ್ದ ಶ್ವಾನ ಹೋಗಿ ಅವರ ಮೃತ ದೇಹಕ್ಕೆ ಮುತ್ತಿಡುತ್ತದೆ ಎಂದರೆ ಮನುಷ್ಯರ ಮೇಲೆ ಶ್ವಾನಗಳು ಪ್ರೀತಿ ಎಷ್ಟಿದೆ ಎನ್ನುವುದನ್ನು ನಾವೆಲ್ಲರು ಮನಗಾಣಬೇಕು ಎಂದರು.ನಾನು ಸಹ ಮನೆಯಲ್ಲಿ ಶ್ವಾನಗಳನ್ನು ಸಾಕಿದ್ದೇನೆ. ನನ್ನ ಸ್ನೇಹಿತ ಮತ್ತಿಕೆರೆ ಜಯರಾಮು ಅವರು ನೀಡಿದ ಶ್ವಾನ ಎಂಬ ತಳಿಗೆ ಸುಬ್ಬ(ರಾಕಿ) ಎಂದು ಹೆಸರಿಟ್ಟಿದ್ದೇನೆ. ಜತೆಗೆ ಬೈರ ಎಂಬ ಮತ್ತೊಂದು ಶ್ವಾನ ಸಾಕಿದ್ದೇವೆ. ನಮಗೆ ಅದರ ಮೇಲೆ ಪ್ರೀತಿ ಎಷ್ಟಿದೆ ಎಂದರೆ ನಾವು ಎಲ್ಲೇ ಇದ್ದರೂ ದಿನಕ್ಕೊಮ್ಮೆಯಾದರೂ ವಿಡಿಯೋ ಕಾಲ್ ಮಾಡಿ ನೋಡಿ ಅದರೊಂದಿಗೆ ಮಾತನಾಡುತ್ತೇವೆ. ಮನುಷ್ಯರು ಸಹ ಜೀವನದಲ್ಲಿ ಶ್ವಾನದಿಂದ ನಿಯತ್ತು ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ ಆರ್.ಸೋಮಶೇಖರ್, ಎಂ.ಗಿರೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಲುವೇಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಜೆಡಿಎಸ್ ಮುಖಂಡ ಚಿಕ್ಕಾಡೆ ಚೇತನ್, ತೀರ್ಪುಗಾರರಾದ ವಿಶ್ವಾಸ್ ಬಸವರಾಜು, ಶೇಖರ್ ರಾವ್, ಆಯೋಜಕರಾದ ಯೋಗರಾಜು, ಕಿರಣ್‌ರಾಜ್, ಚೇತನ್, ರಾಜೇಶ್, ಸೋಮು, ಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.