ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಿ, ಹೃದಯಾಶ್ರಮಗಳ ಸಂಖ್ಯೆ ಹೆಚ್ಚಾದರೆ ಮಾತ್ರ ದೇಶ ಶ್ರೀಮಂತಗೊಳ್ಳಲು ಸಾಧ್ಯ ಎಂದು ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ತಿಳಿಸಿದರು.ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ವಯೋವೃದ್ಧರಿಗೆ ಭಾರತ ವಿಕಾಸ ಪರಿಷತ್ತಿನ ಉಪಾಧ್ಯಕ್ಷ ಕರಿಯಪ್ಪ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು, ದವಸ, ಧಾನ್ಯ ವಿತರಣೆ ಮಾಡಿ ಮಾತನಾಡಿದ ಅವರು, ವಯೋವೃದ್ಧರು, ಬಡವರು, ನಿರ್ಗತಿಕರ ಸೇವೆ ಮಾಡುವುದರಿಂದ ಭಗವಂತನ ಅನುಗ್ರಹ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಭಾರತ ವಿಕಾಸ ಪರಿಷತ್ತಿನ ಉಪಾಧ್ಯಕ್ಷ ಕರಿಯಪ್ಪ ಮಾತನಾಡಿ, ನಾವೇನು ಗಳಿಸಿದ್ದೇವೋ ಅದರಲ್ಲಿ ಒಂದು ಭಾಗವನ್ನು ನೊಂದವರಿಗೆ ನೀಡಿದಾಗ ಮಾತ್ರ ಈ ಜೀವನ ಸಾರ್ಥಕವಾಗುತ್ತದೆ, ಪರರ ಹಿತಕ್ಕಾಗಿ ಸ್ಪಂದಿಸುವ ನಿಟ್ಟಿನಲ್ಲಿ ನನ್ನ ಹುಟ್ಟು ಹಬ್ಬದ ಪ್ರಯುಕ್ತ ನಮ್ಮ ಭಾರತ ವಿಕಾಸ ಪರಿಷತ್ತಿನ ಸದಸ್ಯರೆಲ್ಲರೂ ಒಟ್ಟಾಗಿ ಬಂದು ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಭಾವನೆಗಳನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡ( ಡಿಪಿಎಸ್) ಕಾರ್ಯದರ್ಶಿ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿದರು. ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ಭಾ.ವಿ.ಪ ಪ್ರಾಂತ್ಯ ಉಪಾಧ್ಯಕ್ಷ ಗುರುಮಾದಯ್ಯ, ಖಜಾಂಚಿ ರಮೇಶ್, ಸಂಚಾಲಕ ಬಸವರಾಜು, ಡಾ. ರಾಜ್ ಕಲಾ ಬಳಗದ ಅಧ್ಯಕ್ಷ ಎಲೆಕೆರೆ ಮಂಜುನಾಥ್, ವೃದ್ಧಾಶ್ರಮದ ಸಂಸ್ಥಾಪಕ ಹರೀಶ್ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ವೈಯಕ್ತಿಕವಾಗಿ ವೃದ್ಧಾಶ್ರಮಕ್ಕೆ ೫ ಸಾವಿರ ದೇಣಿಗೆ ನೀಡಿದರು.
ಭಾವಗೀತೆ, ರಂಗಗೀತೆಗಳನ್ನು ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಹಿರಿಯ ಜೀವಗಳನ್ನು ರಂಜಿಸಲಾಯಿತು. ವೃದ್ಧಾಶ್ರಮದ ಹಿರಿಯ ಜೀವಿಗಳಿಗೆ ಹಣ್ಣು, ಹಂಪಲು ಬ್ರೆಡ್, ದವಸ, ಧಾನ್ಯಗಳನ್ನು ವಿತರಿಸಲಾಯಿತು.