ಹಾಸನಾಂಬೆ ದರ್ಶನ ಪಡೆದ ಮಾಜಿ ಸಚಿವ ಈಶ್ವರಪ್ಪ

KannadaprabhaNewsNetwork | Published : Oct 30, 2024 12:38 AM

ಸಾರಾಂಶ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಕುಟುಂಬ ಸಮೇತವಾಗಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದರು. ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಈ ವರ್ಷವೂ ಕೂಡ ಆ ತಾಯಿ ಹಾಸನಾಂಬೆ ದರ್ಶನ ಭಾಗ್ಯ ನಮಗೆ ಕೊಟ್ಟಿದ್ದು, ಆ ತಾಯಿಯ ಕೃಪೆಯಿಂದ ಇಡೀ ಕರ್ನಾಟಕ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ರೈತರು ತಲೆತಲಾಂತರಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ವಕ್ಫ್ ಕಬಳಿಸಲು ಯತ್ನಿಸುತ್ತಿದೆ. ಇದು ನಿಜಕ್ಕೂ ನನಗೆ ತುಂಬಾ ನೋವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಕುಟುಂಬ ಸಮೇತವಾಗಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದರು. ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಈ ವರ್ಷವೂ ಕೂಡ ಆ ತಾಯಿ ಹಾಸನಾಂಬೆ ದರ್ಶನ ಭಾಗ್ಯ ನಮಗೆ ಕೊಟ್ಟಿದ್ದು, ಆ ತಾಯಿಯ ಕೃಪೆಯಿಂದ ಇಡೀ ಕರ್ನಾಟಕ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ. ಆದರೆ ಧರ್ಮ, ರಾಜ್ಯ, ರಾಜಕಾರಣ ವಿಚಾರಕ್ಕೆ ಬಂದಾಗ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗೊಂದಲವಿದೆ. ತಾಯಿ ಅದನ್ನು ಸರಿ ಮಾಡಮ್ಮ, ಎಲ್ಲಾ ರಾಜಕಾರಣಿಗಳು ಕೂಡ ಧರ್ಮದ ರಾಜಕಾರಣ ಮಾಡುವ ನಿಟ್ಟಿನಲ್ಲಿ ನೀನು ಆಶೀರ್ವಾದ ಮಾಡಮ್ಮ ಎಂದು ಹಾಸನಾಂಬೆ ದೇವಿಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

ರೈತ ಸಂತೃಪ್ತಿಯಿಂದ ಇದ್ದರೆ ದೇಶ ಸಮೃದ್ಧಿಯಾಗಿರುತ್ತದೆ. ಆದರೆ ರೈತರ ಜಮೀನನ್ನೆ ಕಸಿದುಕೊಂಡು ವಕ್ಫ್ ಆಸ್ತಿ ಮಾಡಲು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಇದಕ್ಕೆ ಸರಿಯಾದ ಕಡಿವಾಣ ಹಾಕಬೇಕು. ಆ ದಿಕ್ಕಿನಲ್ಲಿ ಆಡಳಿತ ನಡೆಸುವವರಿಗೆ ಬುದ್ಧಿ ಕೊಡಮ್ಮ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

ರಾಜ್ಯದ, ದೇಶದ ಯಾವುದೇ ದೇವಸ್ಥಾನಕ್ಕೆ ಹೋದರೂ ಕೂಡ ಭಕ್ತರ ಸಂಖ್ಯೆ ಕೋಟಿ ಕೋಟಿ ದಾಟುತ್ತಿದೆ. ಇದರ ಅರ್ಥ ದೇಶದಲ್ಲಿ ಧರ್ಮವನ್ನು ಉಳಿಸುತ್ತೇವೆ ಎಂದು ತೀರ್ಮಾನ ಮಾಡಿಕೊಂಡಿರುವವರ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವ ತುಂಬ ಸಂತೋಷ. ಸಣ್ಣ ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿರುವವರು ಅನ್ನಸಂತರ್ಪಣೆ ಮಾಡಿ ಜನರನ್ನ, ಭಕ್ತರನ್ನ ತೃಪ್ತಿ ಪಡಿಸುತ್ತಿರುವುದು ಈ ದೇಶದ ಸೌಭಾಗ್ಯ. ಧರ್ಮ ಜಾಗೃತಿಯಾದಂತಹ ತಾಯಿ ಇನ್ನೂ ನಮಗೆ ಆಶೀರ್ವಾದ ಮಾಡಲಿ. ರಾಜಕೀಯ ಗೊಂದಲಗಳು ನಿವಾರಣೆ ಆಗಲಿ. ರೈತರು ಜಮೀನು ವಕ್ಫ್ ಮಂಡಳಿಗಳಿಂದ ರೈತರಿಗೇ ಸಿಗುವ ರೀತಿಯಲ್ಲಿ ಆಶೀರ್ವಾದ ಮಾಡಲಿ. ಸಂತೋಷದಿಂದ ಎಲ್ಲರೂ ಬದುಕು ರೀತಿಯಲ್ಲಿ ಆಶೀರ್ವಾದ ಮಾಡಮ್ಮ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

Share this article