ಅಡವಿ ಔಡ್ಲ ತಿಂದು ಅಸ್ವಸ್ಥರಾಗಿದ್ದ ಕೋನಾಫೂರ ಗ್ರಾಮದ ಶಾಲೆಯ ಮಕ್ಕಳ
ಕನ್ನಡಪ್ರಭ ವಾರ್ತೆ ಕುಕನೂರುಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಡವಿ ಔಡ್ಲ ತಿಂದು ಅಸ್ವಸ್ಥರಾಗಿರುವ ಕೋನಾಫೂರ ಗ್ರಾಮದ ಶಾಲಾ ಮಕ್ಕಳ ಆರೋಗ್ಯವನ್ನು ಮಾಜಿ ಸಚಿವ ಹಾಲಪ್ಪ ಆಚಾರ್ ವಿಚಾರಿಸಿದರು.
ನಂತರ ಮಾತನಾಡಿದ ಅವರು, ಜನವಸತಿ ಹಾಗೂ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾಡಳಿತ ವಿಷಪೂರಿತ ಗಿಡಗಳನ್ನು ತೆಗೆದು ಆ ಜಾಗದಲ್ಲಿ ಉತ್ತಮ ಗಿಡ ನೆಡಬೇಕು. ಯಾವ ಗಿಡ ಸೂಕ್ತ, ಯಾವುದು ಅಲ್ಲ ಎಂಬುದನ್ನು ಅರಣ್ಯ ಇಲಾಖೆಯವರು, ಜಿಲ್ಲಾಡಳಿತ, ಡಿಸಿ ಅವರು ಅದರ ಬಗ್ಗೆ ಗಮನ ಹರಿಸಿ ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು. ಮುಂದೆ ಈ ರೀತಿಯ ಗಿಡಗಳ ನೆಡುವಿಕೆ ಆಗದಂತೆ ಕ್ರಮ ವಹಿಸಬೇಕು. ಅದೃಷ್ಠವಶಾತ್ ಯಾವ ಮಗುವಿಗೂ ಯಾವುದೇ ರೀತಿಯ ತೀವ್ರತರಹದ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಆಗದಂತೆ ನೋಡಿಕೊಳ್ಳಬೇಕು ಎಂದರು.ವೈದ್ಯರು ಅತ್ಯಂತ ಮುತುವರ್ಜಿಯಿಂದ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಿಷಪೂರಿತ ಗಿಡಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಬೇವಿನ ಗಿಡ ವಿಷ ಇದೆ, ಅದನ್ನು ಯಾರೂ ಮುಟ್ಟುವುದಿಲ್ಲ. ಅದೇ ರೀತಿ ಇಂತಹ ಗಿಡಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ವಿಷಪೂರಿತ ಸಸಿಗಳ ಬೆಳವಣಿಗೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು ಎಂದರು.
ಶಾಲೆ ಆವರಣದಲ್ಲಿ ಶಿಕ್ಷಕರ ಜೊತೆಗೆ ಶಾಲಾ ಸಮಿತಿಯವರು ಸಹ ಶಾಲೆ ಬಗ್ಗೆ ಹೊಣೆಗಾರಿಕೆ ಇರುತ್ತದೆ. ಶಾಲಾ ಸುಧಾರಣೆ, ಮಕ್ಕಳ ಕಾಳಜಿ ಬಗ್ಗೆ ಶಾಲಾ ಸುಧಾರಣಾ ಸಮಿತಿಯವರು ಕಾಳಜಿ ವಹಿಸಬೇಕು. ಅಂದಾಗ ಒಳ್ಳೆಯ ಸಮಾಜ ಕಟ್ಟಲು ಸಾದ್ಯವಾಗುತ್ತದೆ ಎಂದರು.ವೈದ್ಯ ಡಾ. ಮಂಜುನಾಥ ಬ್ಯಾಲಹುಣಸಿ, ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ, ಬಸವನಗೌಡ ತೊಂಡಿಹಾಳ, ಮಾರುತಿ ಗಾವರಾಳ, ಬಸವರಾಜ ಹಾಳಕೇರಿ, ಗೌರಾ ಬಸವರಾಜ, ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಪಪಂ ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ ಇತರರಿದ್ದರು.