ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬಿಜೆಪಿಯಲ್ಲೇ ಇರ್‍ತಾರೆ: ಮಸಾಲಾ ಜಯರಾಮ್

KannadaprabhaNewsNetwork | Published : Mar 21, 2024 1:02 AM

ಸಾರಾಂಶ

ಮಾಜಿ ಸಚಿವ ಮಾಧುಸ್ವಾಮಿಯವರು ಬಿಜೆಪಿಯಲ್ಲೇ ಇರ್‍ತಾರೆ. ಅವರು ಪಕ್ಷ ಬಿಡುವುದಿಲ್ಲ. ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಬೇಸರವಾಗಿದ್ದಾರೆ ಅಷ್ಟೆ. ರಾಜ್ಯ ನಾಯಕರು ಮಾಧುಸ್ವಾಮಿಯವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿ ಮಾಡ್ತಾರೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಮಾಜಿ ಸಚಿವ ಮಾಧುಸ್ವಾಮಿಯವರು ಬಿಜೆಪಿಯಲ್ಲೇ ಇರ್‍ತಾರೆ. ಅವರು ಪಕ್ಷ ಬಿಡುವುದಿಲ್ಲ. ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಬೇಸರವಾಗಿದ್ದಾರೆ ಅಷ್ಟೆ. ರಾಜ್ಯ ನಾಯಕರು ಮಾಧುಸ್ವಾಮಿಯವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿ ಮಾಡ್ತಾರೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಾಧುಸ್ವಾಮಿಯವರ ಮನವೊಲಿಸಲು ರಾಜ್ಯ ನಾಯಕರ ಸೂಚನೆಯ ಮೇರೆಗೆ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್, ಶಾಸಕರಾದ ಗೋಪಾಲಯ್ಯ ನಾನು ಸೇರಿದಂತೆ ಹಲವಾರು ಮುಖಂಡರು ಭೇಟಿಯಾಗಿದ್ದೆವು. ರಾಜ್ಯ ನಾಯಕರು ಮಾಧುಸ್ವಾಮಿಯವರಿಗೆ ಸಾಕಷ್ಟು ಸಮಾಧಾನದ ಮಾತು ಆಡಿದ್ದಾರೆ. ಎಲ್ಲರ ಗುರಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನು ಮಾಡುವು ದಾಗಿದೆ. ಮಾಧುಸ್ವಾಮಿಯವರೂ ಸಹ ಆ ಬಗ್ಗೆ ಏನೂ ಚಕಾರ ಎತ್ತಿಲ್ಲ. ಕೇವಲ ಟಿಕೇಟ್ ವಂಚಿತರಾಗಿರುವ ಬಗ್ಗೆ ಮಾತ್ರ ಅವರಿಗೆ ಅಸಮಾಧಾನವಾಗಿದೆ ಅಷ್ಟೆ. ಎಲ್ಲೂ ಅವರು ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ ಎಂದು ಮಸಾಲಾ ಜಯರಾಮ್ ಸ್ಪಷ್ಟಪಡಿಸಿದರು. ಜಿಲ್ಲೆಯ ಬಿಜೆಪಿಯ ಅಭ್ಯರ್ಥಿಯಾಗಿ ಹೈಕಮಾಂಡ್ ವಿ.ಸೋಮಣ್ಣ ಘೋಷಿಸಿದೆ. ಅಲ್ಲದೇ ಈಗ ಜೆಡಿಎಸ್ ಸಹ ನಮ್ಮೊಂದಿಗೆ ಕೈ ಜೋಡಿಸಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ತಮ್ಮ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದಲೇ ಸುಮಾರು ೧.೨೫ ಲಕ್ಷಕ್ಕೂ ಹೆಚ್ಚು ಮತಗಳು ಬಿಜೆಪಿಯ ಅಭ್ಯರ್ಥಿಯಾಗಿರುವ ವಿ.ಸೋಮಣ್ಣನವರಿಗೆ ಲಭಿಸಲಿದೆ ಎಂದು ಮಸಾಲಾ ಜಯರಾಮ್ ಹೇಳಿದರು.

೨೫ ರಂದು ಸಮನ್ವಯ ಸಭೆ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣನವರನ್ನು ಗೆಲ್ಲಿಸಬೇಕೆಂದು ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್‌ನ ವರಿಷ್ಠರಾಗಿರುವ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಸೂಚಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಜೆಡಿಎಸ್ ಮತ್ತು ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರ ಸಮನ್ವಯ ಸಭೆಯನ್ನು ಮಾ.೨೫ ರ ಸೋಮವಾರ ಪಟ್ಟಣದಲ್ಲಿ ಆಯೋಜಿಸಲಾಗಿದೆ. ಆ ಸಭೆಗೆ ಎಲ್ಲಾ ಕಾರ್ಯಕರ್ತರು ಆಗಮಿಸಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕಂಕಣಬದ್ಧರಾಗಿರಬೇಕೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ಕರೆ ನೀಡಿದರು.

ರಾಮ, ಮೋದಿ ಜಪ:

ಇಡೀ ದೇಶದಲ್ಲಿ ಮೋದಿ ಮತ್ತು ರಾಮನ ಜಪ ಮಾಡಲಾಗುತ್ತಿದೆ. ಪ್ರಪಂಚವೇ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದೆ. ಎಲ್ಲಾ ಸಮೀಕ್ಷೆಗಳೂ ಸಹ ಬಿಜೆಪಿ ನಾನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಗಳಿಸಲಿದೆ ಎಂದು ಭವಿಷ್ಯ ನುಡಿಯುತ್ತಿದೆ. ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವುದು ಹಿಂದೂಗಳಿಗೆ ಹೆಮ್ಮೆಯ ಸಂಗತಿಯಾಗಿದೆ. ಇದರಿಂದಾಗಿ ಬಿಜೆಪಿಗೆ ಇನ್ನೂ ಹೆಚ್ಚಿನ ಮತ ಲಭಿಸಲಿದೆ ಎಂದರು.

ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ ಮಾತನಾಡಿ, ನರೇಂದ್ರ ಮೋದಿ ಜಾಗತಿಕ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಜಗತ್ತಿನ ೫ ನೇ ಆರ್ಥಿಕ ಶಕ್ತಿಯುತ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಹಾಗಾಗಿ ಇಂತಹ ಮಹಾನ್ ನಾಯಕನನ್ನು ಹೊಂದಿರುವ ನಮ್ಮ ಪಕ್ಷವೇ ಶ್ರೇಷ್ಠ. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಿ ದೇಶವನ್ನು ಉತ್ತುಂಗದ ಶಿಖರಕ್ಕೆ ಏರುವುದನ್ನು ಕೋಟ್ಯಂತರ ಬಿಜೆಪಿ ಕಾರ್ಯುಕರ್ತರು ಎದುರು ನೋಡುತ್ತಿದ್ದಾರೆಂದು ಮೃತ್ಯುಂಜಯ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾದ ತುರುವೇಕೆರೆ ಪ್ರಭಾರಿ ಸಾಗರನಹಳ್ಳಿ ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲೇಗೌಡ, ಜಿಲ್ಲಾ ಕಾರ್ಯದರ್ಶಿ ಮುದಿಗೆರೆ ಕೆಂಪೇಗೌಡ. ಮುಖಂಡರಾದ ಅರಳೀಕೆರೆ ಶಿವಯ್ಯ, ಜಿಲ್ಲಾ ಉಪಾಧ್ಯಕ್ಷೆ ಅನಿತಾ ನಂಜುಂಡಯ್ಯ, ಕಡೇಹಳ್ಳಿ ಸಿದ್ದೇಗೌಡ, ಸೋಮಶೇಖರ್, ಹೊಸಳ್ಳಿ ಮಲ್ಲೇಶ್, ಉಗ್ರಯ್ಯ, ಮಾಚೇನಹಳ್ಳಿ ರಾಮಣ್ಣ, ಸೂರ್ಯ ಪ್ರಕಾಶ್, ಮುದ್ದೇಗೌಡ, ಡೊಂಕಿಹಳ್ಳಿ ಪ್ರಕಾಶ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Share this article