ಮಾಜಿ ಸಚಿವ ವೆಂಕಟರಮಣಪ್ಪ ನಿಧನ

KannadaprabhaNewsNetwork |  
Published : May 30, 2026, 01:30 AM IST
ಫೋಟೋ 29ಪಿವಿಡಿ2ಮಾಜಿ ಸಚಿವ ವೆಂಕಟರಮಣಪ್ಪ ನಿಧನ   | Kannada Prabha

ಸಾರಾಂಶ

ಪಾವಗಡ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್‌.ವಿ.ವೆಂಕಟೇಶ್‌ ಅವರ ತಂದೆ, ಹಿರಿಯ ರಾಜಕಾರಣಿ, ಮಾಜಿ ಸಚಿವ ವೆಂಕಟರಮಣಪ್ಪ (75) ಅವರು ಶುಕ್ರವಾರ ಬೆಂಗ‍ಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಪಾವಗಡ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್‌.ವಿ.ವೆಂಕಟೇಶ್‌ ಅವರ ತಂದೆ, ಹಿರಿಯ ರಾಜಕಾರಣಿ, ಮಾಜಿ ಸಚಿವ ವೆಂಕಟರಮಣಪ್ಪ (75) ಅವರು ಶುಕ್ರವಾರ ಬೆಂಗ‍ಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಪಾವಗಡ ತಾಲೂಕಿನ ಹನುಮಂತನಹಳ್ಳಿಯ ತೋಟದ ಮನೆಯಲ್ಲಿ ವಾಸವಾಗಿದ್ದ ಮಾಜಿ ಸಚಿವ ವೆಂಕಟರಮಣಪ್ಪ ಅವರು ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಕಾರಿನಲ್ಲಿ ಬೆಂಗಳೂರಿಗೆ ಕರೆದ್ಯೊಯ್ಯಲಾಗಿತ್ತು. ರಾತ್ರಿ ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ ಶುಕ್ರವಾರ ಬೆಳಗಿನ ಜಾವ ಹೃದಯಾಘಾತ ಸಂಭವಿಸಿ ನಿಧನರಾಗಿರುವುದಾಗಿ ತಿಳಿದುಬಂದಿದೆ. ಶಾಸಕ ವೆಂಕಟೇಶ , ಹಿರಿಯ ಪುತ್ರ ಕುಮಾರಸ್ವಾಮಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಶನಿವಾರ ಬೆಳಿಗ್ಗೆ ತಾಲೂಕಿನ ಹನುಮಂತನಹಳ್ಳಿಯ ತೋಟದ ಮನೆಯಲ್ಲಿ ವಿಧಿವಿಧಾನಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

ತಾಲೂಕಿನ ವೈ.ಎನ್‌.ಹೊಸಕೋಟೆ ಹೋಬಳಿಯ ಹನುಮಂತನಹಳ್ಳಿ ಗ್ರಾಮದ ವಾಸಿಯಾಗಿದ್ದ ಇವರು ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ರೈತ ಹಾಗೂ ಜನಪರ ಕಾಳಜಿ ಹಿನ್ನೆಲೆಯಿಂದ ಬಂದ ವೆಂಕಟರಮಣಪ್ಪ ಮೊದಲಿಗೆ ತಾಲೂಕಿನ ಮರಿದಾಸನಹಳ್ಳಿ ಗ್ರಾಮದ ವಿಎಸ್‌ಎಸ್‌ನ ಸೊಸೈಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಮೂಲಕ ರಾಜಕೀಯ ರಂಗ ಪ್ರವೇಶಿಸಿ ಅನೇಕ ಏಳುಬೀಳುಗಳೊಂದಿಗೆ ತಾಲೂಕು ಕಾಂಗ್ರೆಸ್‌ ನಲ್ಲಿ ರಾಜಕಾರಣಿಯಾಗಿದ್ದರು. ಕಾಂಗ್ರೆಸ್‌ ನಿಂದ 1989,1999 ಹಾಗೂ 2018ರಲ್ಲಿ 3 ಬಾರಿ ಹಾಗೂ 2008ರಲ್ಲಿ ಒಂದು ಬಾರಿ ಪಕ್ಷೇತರರಾಗಿ ಒಟ್ಟು 4 ಬಾರಿ ಶಾಸಕರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು. 2008ರಿಂದ 2013ರವರೆಗಿನ ಬಿಜೆಪಿ ಸರ್ಕಾರದಲ್ಲಿ 2 ಬಾರಿ ಕಾರ್ಮಿಕ ಮತ್ತು ರೇಷ್ಮೆ ಖಾತೆ ಸಚಿವರಾಗಿ ಕೆಲಸ ಮಾಡಿ ಜನಮನ್ನಣೆಗಳಿಸಿದ್ದರು.

ಪಾವಗಡ ವಿಧಾನಸಭಾ ಕ್ಷೇತ್ರದಿಂದ 1989, 1999, 2008 (ಪಕ್ಷೇತರ) ಮತ್ತು 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತದಲ್ಲಿ ಒಟ್ಟು ಆರು ಬಾರಿ ಸ್ಪರ್ಧಿಸಿ ನಾಲ್ಕೂ ಬಾರಿ ಜಯಗಳಿಸಿದ್ದ ವೆಂಕಟರಮಣಪ್ಪ ಎಲ್ಲರ ಜೊತಗೆ ಉತ್ತಮ ಸಂಬಂಧ ಹೊಂದಿದ್ದರು. 2023 ವಿಧಾನಸಭಾ ಚುನಾವಣೆಯ ವೇಳೆ ಪುತ್ರನಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸಿ ತಾವು ಸಕ್ರೀಯ ರಾಜಕಾರಣದಿಂದ ಹಿಂದೆ ಸರಿದಿದ್ದರು.

ತಾಲೂಕು ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು, ತಾಲೂಕಿನ ಆಪ್ತ ಮುಖಂಡರಾದ ಮಾಜಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಟಿ.ಎನ್‌.ನರಸಿಂಹಯ್ಯ, ಅನ್ನದಾನಪುರ ಲಕ್ಷ್ಮೀ ನಾರಾಯಣಪ್ಪ,ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌, ವಿರಪಸಮುದ್ರ ರಾಮಾಂಜಿನಪ್ಪ, ಗುಮ್ಮಘಟ್ಟ ಅಧಿನಾರಾಯಣಪ್ಪ,ವಿಶೇಶ್ವರಯ್ಯ,ಕರೆಕ್ಯಾತನಹಳ್ಳಿ ಮಂಜುನಾಥ್‌, ವಾಗೀಶ್‌ಸ್ವಾಮಿ ಕೆ.ಆರ್‌.ಸುರೇಶ್‌,ನವೀನ್‌,ಗುಮ್ಮಘಟ್ಟ ಶ್ರೀನಿವಾಸಲು, ಈಶ್ವರ್‌, ನಾಗೇನಹಳ್ಳಿಯ ಭಾಸ್ಕರ್‌ ನಾಯ್ಡ್‌ ಅನೇಕ ಮುಖಂಡರು ಮೃತರ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದರು.

ತುಂಗಭದ್ರಾ ನೀರು ತಂದ ಭಗೀರಥ

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ತುಂಗಭದ್ರಾ ಕುಡಿಯುವ ನೀರು ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೆಂಕಟರಮಣಪ್ಪ ಸಿಎಂ ಸಿದ್ದು ಮನವೊಲಿಸಿ 2300 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ ಹೊಸಪೇಟೆಯ ಟಿ.ಬಿ.ಡ್ಯಾಂನಿಂದ ಪಾವಗಡಕ್ಕೆ ನೀರು ತಂದಿದ್ದರು. ಜೊತೆಗೆ ನೀರಾವರಿ ಪ್ರಗತಿಗೆ ಕೆರೆಗಳಿಗೆ ನೀರು ತುಂಬಿಸುವ ಎತ್ತಿನಹೊಳೆ, ಭದ್ರಾಮೇಲ್ದಂಡೆ ಯೋಜನೆ ಮತ್ತು ರೈಲ್ವೆ ಯೋಜನೆಗಳನ್ನು ತಾಲೂಕಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಪಟ್ಟಣದ ಜನತೆಗೆ ಕುಡಿಯುವ ನೀರಿನ ಅಭಾವ ನಿಗಿಸಲು ತಾಲೂಕಿನ ನಾಗಲಮಡಿಕೆ ಗ್ರಾಮದ ಉತ್ತರಪಿನಾಕಿನಿ ನದಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ,ಅಲ್ಲಿಂದ ಪೈಪ್‌ಲೈನ್‌ ಮೂಲಕ ನಗರದ ಅಗಸರಕುಂಟೆ ನೀರು ಸರಬರಾಜ್‌ ಮಾಡಿಸಿ ಪಟ್ಟಣದ ಜನತೆಗೆ ಪೂರೈಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಕೋವಿಡ್ ಸಮಯದಲ್ಲಿ ತಾಲೂಕಿನ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಆಹಾರ ಕಿಟ್ ವಿತರಣೆ ಹಾಗೂ ಅಂಬುಲೆನ್ಸ್ ಸೇವೆಯನ್ನು ಒದಗಿಸಿದ್ದರು. ವೆಂಕಟರಮಣಪ್ಪ ಶಾಸಕರ ಅವಧಿಯಲ್ಲಿ ರಸ್ತೆ, ಗ್ರಾಮೀಣ ಪ್ರದೇಶಗಳಲ್ಲಿ ಸಿಸಿರಸ್ತೆ, ಬಡವರ ಶುಭ ಕಾರ್ಯಗಳಿಗೆ ಸಮುದಾಯ ಭವನ, ಸಣ್ಣ ರೈತರಿಗೆ ಕೊಳವೆಬಾವಿ, ಅಂಗನವಾಡಿ, ಶಾಲಾ ಕಾಲೇಜುಗಳ ಮಂಜೂರಾತಿ, ಶಾಲಾ ಕಟ್ಟಡಗಳ ನಿರ್ಮಾಣ,ಸೋಲಾರ್‌ ಪ್ರಗತಿ ಸೇರಿದಂತೆ ಇತರೆ ಅನೇಕ ರೀತಿಯ ರೈತ ಮತ್ತು ಜನಪರ ಕೆಲಸ ಮಾಡಿ ತಾಲೂಕಿನ ಜನಮನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗಳ ವಿಲೀನ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮನೆಗೆ ಸುಹಾಸ್ ಭೇಟಿ