ಮಂಡ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಶ್ರೀನಿವಾಸ್‌ ಕಾಂಗ್ರೆಸ್‌ ಸೇರ್ಪಡೆ

KannadaprabhaNewsNetwork |  
Published : Apr 18, 2024, 02:19 AM IST
17ಕೆಎಂಎನ್‌ಡಿ-8ಮಂಡ್ಯದ ಕರ್ನಾಟಕ ಸಂಘದಲ್ಲಿಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ನೇತೃತ್ವದಲ್ಲಿಮಾಜಿ ಶಾಸಕ ಎಂ.ಶ್ರೀನಿವಾಸ್‌ ಅವರುಕಾಂಗ್ರೆಸ್‌ ಸೇರ್ಪಡೆಯಾದರು. | Kannada Prabha

ಸಾರಾಂಶ

ಆರು ತಿಂಗಳಿಂದ ತಟಸ್ಥ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದ್ದ ಎಂ.ಶ್ರೀನಿವಾಸ್‌ ಅವರನ್ನು ಸಚಿವ ಎನ್‌.ಚಲುವರಾಯಸ್ವಾಮಿ ಇತ್ತೀಚೆಗಷ್ಟೇ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯ ವಿಚಾರಿಸಿದ್ದರು. ಆರೋಗ್ಯ ಸುಧಾರಿಸಿಕೊಂಡು ಬಂದಿರುವ ಎಂ.ಶ್ರೀನಿವಾಸ್‌ ಬುಧವಾರ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಶಾಸಕ ಎಂ.ಶ್ರೀನಿವಾಸ್‌ ಅವರು ಜೆಡಿಎಸ್‌ ತೊರೆದು ಬುಧವಾರ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಸಮ್ಮುಖದಲ್ಲಿ ನಗರದ ಕರ್ನಾಟಕ ಸಂಘದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮಂಡ್ಯವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ಶ್ರೀನಿವಾಸ್‌ 2023ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಟಿಕೆಟ್‌ ವಂಚಿತರಾಗಿ ಅಸಮಾಧಾನಗೊಂಡಿದ್ದರು. ಟಿಕೆಟ್‌ ಕೈತಪ್ಪಿದ್ದರಿಂದ ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ಆನಂದ್‌ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಜೆಡಿಎಸ್‌ ಸೋಲಿಗೆ ಕಾರಣರಾಗಿದ್ದರು.

ಆರು ತಿಂಗಳಿಂದ ತಟಸ್ಥ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದ್ದ ಎಂ.ಶ್ರೀನಿವಾಸ್‌ ಅವರನ್ನು ಸಚಿವ ಎನ್‌.ಚಲುವರಾಯಸ್ವಾಮಿ ಇತ್ತೀಚೆಗಷ್ಟೇ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯ ವಿಚಾರಿಸಿದ್ದರು. ಆರೋಗ್ಯ ಸುಧಾರಿಸಿಕೊಂಡು ಬಂದಿರುವ ಎಂ.ಶ್ರೀನಿವಾಸ್‌ ಬುಧವಾರ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.

ಪಕ್ಷಕ್ಕೆ ಎಂ.ಶ್ರೀನಿವಾಸ್‌ ಅವರನ್ನು ಬರಮಾಡಿಕೊಂಡ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಜೆಡಿಎಸ್ ಪರಿಸ್ಥಿತಿ ಯಾರಿಗೂ ಗೊತ್ತಿಲ್ಲ. ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಹತ್ತಿರ ಹೋದವರಿಗೆ ಮಾತ್ರ ಪೆಟ್ಟು ತಿನ್ನುವುದು ಗೊತ್ತಾಗುತ್ತದೆ ಎಂದರು.

ಮಾಜಿ ಶಾಸಕ ಎಂ.ಶ್ರೀನಿವಾಸ್ ನಾಯಕತ್ವದಲ್ಲಿ ತಗ್ಗಹಳ್ಳಿ ವೆಂಕಟೇಶ್, ಯೋಗೇಶ್ ಸೇರಿದಂತೆ ನೂರಾರು ಜನರ ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.

ಜೆಡಿಎಸ್ ಅಧಿಕಾರ ಸಿಕ್ಕಾಗ ಮಂಡ್ಯ ಜಿಲ್ಲೆಯ ಒಬ್ಬ ರೈತನನ್ನು ಎಂಎಲ್‌ಸಿ ಮಾಡಲಿಲ್ಲ. ದುಡ್ಡಿರುವ ಶರವಣ ಅಂತಹವರನ್ನು ಮಾಡಿದ್ದಾರೆ. ಆದ್ದರಿಂದ ಜಿಲ್ಲೆಯವರನ್ನೇ ಸಂಸದರಾಗಿ ಆಯ್ಕೆ ಮಾಡೋಣ ಬೇರೆಯವರನ್ನು ಮಾಡುವುದು ಬೇಡ ಎಂದರು.

ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಜೆಡಿಎಸ್ ನಾಯಕರ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇನೆ. ನಾನು ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲು ಚಲುವರಾಯಸ್ವಾಮಿ ಅವರೇ ಕಾರಣ. 2018 ರ ಚುನಾವಣೆಯಲ್ಲಿ ಅವರ ಜೊತೆ ಉಳಿಯಲು ಆಗಲಿಲ್ಲ. ಆದ್ದರಿಂದ ವಿನಮ್ರತೆಯಿಂದ ನನ್ನ ತಪ್ಪನ್ನು ಕ್ಷಮಿಸಿ ಎಂದು ಕೋರಿದರು.

ಈ ಸಂದರ್ಭದಲ್ಲಿ ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಮೇಶ್ ಮಿತ್ರ,ಕೋಲಕಾರನದೊಡ್ಡಿ ನಾಗರಾಜು, ಶಿವನಂಜು, ರಾಜು ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ