ಎಸ್ಟಿಗೆ ಕೋಲಿ ಸಮಾಜ ಸೇರ್ಪಡೆ ಪ್ರಸ್ತಾವ ಕೇಂದ್ರದಿಂದ ವಾಪಸ್

KannadaprabhaNewsNetwork |  
Published : Apr 18, 2024, 02:19 AM IST
ಕಲಬರಗಿ ಕಾಂಗ್ರೆಸ್‌ ಕಚೇರಿಯಲ್ಲಿ ಪ್ರಿಯಾಂಕ್‌ ಖರ್ಗೆ ಸುದ್ದಿಗೋಷ್ಠಿ ನಡೆಸಿ ಕಲಿ ಸಮಾಜಕ್ಕೆ ಎಸ್ಟಿ ಪಟ್ಟ ನೀಡೋ ವಿಚಾರದಲ್ಲಿನ ಈಚೆಗಿನ ಬೆಳವಣಿಗೆ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಪ್ರಸ್ತಾವನೆಯನ್ನು ವಾಪಸ್ ಕಳಿಸಿರುವ ವಾಸ್ತವಾಂಶವನ್ನು ಮರೆಮಾಚಿ ಸಂಸದ ಉಮೇಶ್ ಜಾಧವ ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ: ಪ್ರಿಯಾಂಕ್‌ ಖರ್ಗೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಕೋಲಿ ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ವಾಪಸ್ ಕಳಿಸಿದ್ದು ಲೋಕಸಭೆ ಚುನಾವಣೆಯ ಬಳಿಕ ಮತ್ತೊಮ್ಮೆ ಪ್ರಸ್ತಾವನೆಯನ್ನು ಖುದ್ದಾಗಿ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಾವನೆಯನ್ನು ವಾಪಸ್ ಕಳಿಸಿರುವ ವಾಸ್ತವಾಂಶವನ್ನು ಮರೆಮಾಚಿ ಸಂಸದ ಉಮೇಶ್ ಜಾಧವ ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು‌.

ಕಳೆದ‌ ಲೋಕಸಭೆ ಚುನಾವಣೆ ವೇಳೆ ಕೋಲಿ ಕಬ್ಬಲಿಗ, ಕುರುಬ ಸಮಾಜವನ್ನು ಎಸ್‌ಟಿ ಸೇರಿಸುವುದಾಗಿ ಹೇಳಿದ್ದ ಚುನಾವಣೆ ಉಸ್ತುವಾರಿ ಎಂಎಲ್‌ಸಿ ರವಿಕುಮಾರ ಹಾಗೂ ಜಾಧವ ಮತ ಪಡೆದಿದ್ದರು. ಆದರೆ ಈಗ ಎಲ್ಲರೂ ಮೌನವಾಗಿದ್ದಾರೆ. ‘ಉಮೇಶ್ ಜಾಧವ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕೈಲಾಗದ ಮನುಷ್ಯ. ಈಗ ವಾಸ್ತವಾಂಶವನ್ನು ಜನರ ಮುಂದಿಟ್ಟು ಅವರ ಕೈ ಕಾಲು ಹಿಡಿದು ಕ್ಷಮೆ ಕೇಳಲಿ’ ಎಂದು ಆಗ್ರಹಿಸಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೆ ಎಲ್ಲ ಕೆಲಸ ಆಗುತ್ತವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ಜಾಧವ ಅವರಿಗೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಯಾಕೆ ಆಗಲಿಲ್ಲ? ಮೋದಿ ರಾಷ್ಟ್ರಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ ಜಿಲ್ಲಾ ಮಟ್ಟದಲ್ಲಿ ಸುಳ್ಳು ಹೇಳುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಕೋಲಿ ಕಬ್ಬಲಿಗ ಪ್ರಸ್ತಾವನೆ ಚರ್ಚೆಗೆ ಬಂದಾಗ ಮಲ್ಲಿಕಾರ್ಜು ಖರ್ಗೆ ಅವರು ಸಂಸತ್ತಿನಲ್ಲಿ ಇರಲಿಲ್ಲ ಎನ್ನುವ ಜಾಧವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಜಾಧವ ಅವರಿಗೆ ಸಂಸದೀಯ ವ್ಯವಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಂತಿಲ್ಲ. ರಾಜ್ಯ ಸರ್ಕಾರವೇ ಪ್ರಸ್ತಾವನೆ ಕಳಿಸಿದ ಮೇಲೆ ಒಪ್ಪಿಗೆ ಇದೆ ಅಂತ ಅರ್ಥ. ಬಿಜೆಪಿ ಸರ್ಕಾರ 246 ಸಂಸದರನ್ನು ಸಸ್ಪೆಂಡ್ ಮಾಡಿ ಶೇ.57 ಬಿಲ್ ಗಳನ್ನು ಎರಡೇ ವಾರದಲ್ಲಿ ಯಾವುದೇ ಚರ್ಚೆ ನಡೆಸದೇ ಪಾಸ್ ಮಾಡಿದ್ದಾರೆ. ತ್ರಿವಳಿ ತಲಾಖ್, ಮಹಿಳಾ ಮೀಸಲಾತಿ ಬಿಲ್, ಜಮ್ಮು ಕಾಶ್ಮೀರ ರೀ ಅರ್ಗನೈಸೇಷನ್ ಬಿಲ್ ಗಳು ಹಾಗೆ ಪಾಸ್ ಆಗಿವೆ. ಅದರಂತೆ ಕೋಲಿ ಕಬ್ಬಲಿಗ ಹಾಗೂ ಕುರುಬ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕಿತ್ತು ಎಂದರು.

ಕಳೆದ ಚುನಾವಣೆಯ ಸಂದರ್ಭದಲ್ಲಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ರವಿಕುಮಾರ ಈಗ ಯಾಕೆ ಮಾತನಾಡುತ್ತಿಲ್ಲ? ಈ ಸಲ ಮತ್ತೆ ಚುನಾವಣೆಗೆ ಬಂದರೆ ಅವರಿಗೆ ಜನರು ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಬಿಜೆಪಿ ಅವರನ್ನು ಬದಲಾಯಿಸಿದೆ. ನೀವು ರಕ್ತದಲ್ಲಿ ಬರೆದುಕೊಡುವುದು ಬೇಡ. ಕಾಗದಲ್ಲಿ ಪೆನ್ ನಲ್ಲಿ ಬರೆಸಿಬಿಡಿ ಸಾಕು ಎಂದು ವ್ಯಂಗ್ಯವಾಡಿದರು. ಶಿವಕುಮಾರ ಹೊನಗುಂಟಿ, ಈರಣ್ಣ ಝಳಕಿ, ಲಚ್ಚಪ್ಪ ಜಮಾದಾರ, ಕಿರಣ್ ದೇಶಮುಖ, ಪ್ರವೀಣ್ ಹರವಾಳ ಇದ್ದರು.ಲೀಡ್‌ ಕೊಡೋ ಜವಾಬ್ದಾರಿ ಸಚಿವರ ಮೇಲಿದೆ: ಖರ್ಗೆ

ಕಲಬುರಗಿ: ಕಾಂಗ್ರೆಸ್ ನಾಯಕರ ವಿರುದ್ಧ ದೂರು ಬಂದರೆ ತಕ್ಷಣ ನೊಟೀಸ್‌ ನೀಡುವ ಚುನಾವಣಾ ಆಯೋಗ, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಹಾಗೂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನೀಡಿದ ದೂರಿನ ಮೇಲೆ ಕ್ರಮ ಜರುಗಿಸಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ಖುರ್ಚಿ ಖಾಲಿ ಮಾಡಬೇಕಾಗುತ್ತದೆ ಎನ್ನುವ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಚಿವರಿಗೆ ಸಹಜವಾಗಿ ಜವಾಬ್ದಾರಿಗಳಿವೆ. ಕಲಬುರಗಿ ಗೆ ನನಗೆ ಹಾಗೂ ಶರಣಪ್ರಕಾಶ ಪಾಟೀಲ ಹಾಗೆ ರಾಯಚೂರಿಗೆ ದರ್ಶನಾಪುರ ಹಾಗೂ ಬೋಸ್ ರಾಜ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಹಾಗಾಗಿ ನಾವು ಲೀಡ್ ಕೊಡಲೇಬೇಕು ಎಂದರು.

ಮಾಜಿ ಸಚಿವ ಮಾಲೀಕಯ್ಯ ಅವರು ಒಂದು ಕಾಲು ಬಿಜೆಪಿಯಿಂದ ಹೊರಗೆ ಇಟ್ಟಿದ್ದಾರೆ. ನಿಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೀರಾ ಎಂದು ಕೇಳಿದಾಗ ಉತ್ತರಿಸಿದ ಅವರು ಗುತ್ತೇದಾರ ಈಗಾಗಲೇ ಎರಡೂ ಕಾಲು ಹೊರಗೆ ಇಟ್ಟಿದ್ದಾರೆ‌. ನನ್ನೊಂದಿಗೆ ವೈಯಕ್ತಿಕವಾಗಿ ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ನಮ್ಮ ವೈಯಕ್ತಿಕ ವಿಚಾರಗಳು ಏನೇ ಇರಲಿ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದರು.

ಪಕ್ಷದ ತತ್ವ ಸಿದ್ಧಾತವನ್ನು ಒಪ್ಪಿ ಮೋದಿ ಬಂದರೂ ಸ್ವಾಗತಿಸುತ್ತೇವೆ, ಜಾಧವ ಬಂದರೂ ಸ್ವಾಗತಿಸುತ್ತೇವೆ. ಬಿಜೆಪಿಯವರು ಕೇವಲ ಸಮಾಜ ಒಡೆಯುತ್ತಾರೆ ಎಂದು ಭಾವಿಸಿದ್ದೆವು ಆದರೆ ಕುಟುಂಬವನ್ನೂ ಒಡೆಯುತ್ತಾರೆ ಎಂದು ಗುತ್ತೇದಾರ ಹೇಳಿದ್ದಾರೆ ಎಂದು ಕಿಚಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ