ಕನ್ನಡಪ್ರಭ ವಾರ್ತೆ ಹಾಸನ
ಹಾಲಿ ಶಾಸಕ ಸ್ವರೂಪ್ ಪ್ರಕಾಶ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, "ಅವರು ಬಿಸಿ ರಕ್ತದಲ್ಲಿ ಮಾತನಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಜನರ ಪರವಾಗಿ ಉತ್ತಮ ಕೆಲಸ ಮಾಡಲಿ. ಅಭಿವೃದ್ಧಿ ಕೆಲಸಗಳ ಮೂಲಕ ಜನರ ವಿಶ್ವಾಸ ಗಳಿಸಲಿ ಎಂದರು. ಮುಂದಿನ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಎನ್‌ಡಿಎ ಇದೆ. ಹಾಲಿ ಶಾಸಕರು ಜನರ ನಿರೀಕ್ಷೆ ಈಡೇರಿಸದೆ ಜನರ ಆಕ್ರೋಶಕ್ಕೆ ಗುರಿಯಾದರೆ ನಾನು ಅಭ್ಯರ್ಥಿಯಾಗುತ್ತೇನೆ. ಆದರೆ ಅವರು ಅಭ್ಯರ್ಥಿಯಾದರೆ ನಾವೆಲ್ಲ ಸೇರಿ ಅವರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮಿಬ್ಬರನ್ನು ಬಿಟ್ಟು ಪಕ್ಷ ಬೇರೆ ಯಾರಿಗಾದರೂ ಟಿಕೆಟ್ ನೀಡಿದರೂ ಅವರ ಗೆಲುವಿಗಾಗಿ ಸಂಪೂರ್ಣ ಶ್ರಮಿಸುತ್ತೇವೆ ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರ ಕುರಿತು ಮಾತನಾಡಿದ ಅವರು, ಪ್ರೀತಂ ಗೌಡರ ಬಗ್ಗೆ ಆಳ-ಅಗಲ ಗೊತ್ತಿಲ್ಲದವರು ಮಾತನಾಡುತ್ತಾರೆ. ನನ್ನ ಶಕ್ತಿ ಏನು ಎಂಬುದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಚೆನ್ನಾಗಿ ಗೊತ್ತಿದೆ. ಕಾರ್ಯಕರ್ತರ ಅಭಿಮಾನ ಮತ್ತು ಬೆಂಬಲವೇ ನನ್ನ ದೊಡ್ಡ ಶಕ್ತಿ ಎಂದರು. ಪ್ರೀತಂ ಗೌಡ ಬೇಡ ಎಂದು ಪಕ್ಷ ಹೇಳಿದರೆ ನಾನು ರಾಜಕೀಯದಿಂದ ವಿಶ್ರಾಂತಿ ಪಡೆಯಲು ಸಿದ್ಧ. ಪಕ್ಷದ ನಿರ್ಧಾರವೇ ನನಗೆ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು. ಶಾಸಕ ಸ್ವರೂಪ್ ಪ್ರಕಾಶ್ ಅವರ ರಾಜಕೀಯ ಹಿನ್ನೆಲೆಯನ್ನು ಉಲ್ಲೇಖಿಸಿದ ಪ್ರೀತಂ ಗೌಡ, "ಅವರು ಹೊಸದಾಗಿ ರಾಜಕೀಯಕ್ಕೆ ಬಂದವರು. ಪ್ರತಿದಿನ ಲಾಟರಿ ಟಿಕೆಟ್ ಹೊಡೆಯುವುದಿಲ್ಲ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರು. ಅನುಕಂಪ ಮತ್ತು ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಪ್ರತಿಯೊಂದು ಚುನಾವಣೆಯೂ ಒಂದೇ ರೀತಿಯಾಗಿರುವುದಿಲ್ಲ” ಎಂದು ಟೀಕಿಸಿದರು.ಹೈಕಮಾಂಡ್ ನಿರ್ಧಾರ ಅಂತಿಮ:ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ಮಾತನಾಡಿದ ಅವರು, ಗೆದ್ದ ಎಲ್ಲ ಶಾಸಕರಿಗೂ ಟಿಕೆಟ್ ಕೊಡಬೇಕೆಂದರೆ ಜೆಡಿಎಸ್‌ನ ೧೮ ಶಾಸಕರಿಗೂ ಬಿ-ಫಾರಂ ಸಾಕಾಗುತ್ತದೆಯೇ? ಆದರೆ ಅವರು ೭೦-೮೦ ಸ್ಥಾನಗಳನ್ನು ಕೇಳುತ್ತಿದ್ದಾರೆ. ಅಂತಿಮವಾಗಿ ಎಲ್ಲವೂ ಮೈತ್ರಿ ಪಕ್ಷಗಳ ನಡುವೆ ನಡೆಯುವ ಚರ್ಚೆ ಮತ್ತು ಪಕ್ಷದ ಹೈಕಮಾಂಡ್ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಚನ್ನಪಟ್ಟಣ ಕ್ಷೇತ್ರದ ಉದಾಹರಣೆ ನೀಡಿದ ಅವರು, "ಚನ್ನಪಟ್ಟಣದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಸನದಲ್ಲೂ ಅಂತಿಮ ತೀರ್ಮಾನವನ್ನು ಪಕ್ಷವೇ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಟಿಕೆಟ್ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ಹಾಲಿ ಶಾಸಕರು ಟಿಕೆಟ್ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಕ್ಷ ವಿವಿಧ ಹಂತಗಳಲ್ಲಿ ಸರ್ವೆ ನಡೆಸುತ್ತದೆ. ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಹಾಗೂ ಗೆಲುವಿನ ಸಾಧ್ಯತೆಯನ್ನು ಆಧರಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡರಾದ ಎಸ್. ಡಿ. ಚಂದ್ರು ಇತರರು ಉಪಸ್ಥಿತರಿದ್ದರು.