ಚನ್ನಪಟ್ಟಣ: ಬೆಂಗಳೂರಿನಿಂದ ೧೦೦ ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ರಾಜಧಾನಿಯಿಂದ ಕರಾವಳಿ ಭಾಗದ ಮಂಗಳೂರಿಗೆ ಕೂಡ ಇದೇ ರೀತಿ ಚತುಷ್ಪಥ ಮಾರ್ಗ ಅಭಿವೃದ್ಧಿಯನ್ನೂ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ತಾಲೂಕಿನ ಎಲೇಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು-ತುಮಕೂರು ಚತುಷ್ಪಥ ಮಾರ್ಗದ ಸರ್ವೆ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಮುಂದಿನ ಒಂದೂವರೆ- ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಇದೆ. ಹಾಗೆಯೇ ಬೆಂಗಳೂರು- ಮೈಸೂರು ಚತುಷ್ಪಥ ನಿರ್ಮಾಣಕ್ಕೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಎಂ.ಬಿ.ಪಾಟೀಲರ ಕೋರಿಕೆಯಂತೆ ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ವೈಟ್ ಫೀಲ್ಡ್ ತನಕ ಇರುವ ನಾಲ್ಕು ಪಥದ ಮಾರ್ಗವನ್ನು ಮುಂದಕ್ಕೂ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ ಭೂಸ್ವಾಧೀನವನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ ಎಂದು ತಿಳಿಸಿದರು.

ಬೆಂ-ಮಂ ಚತುಷ್ಪಥ ಮಾರ್ಗ: ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ತ್ವರಿತ ರೈಲು ಸಂಚಾರ ವ್ಯವಸ್ಥೆ ಆಗಬೇಕಿದೆ. ಇದಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗ ಆಗಬೇಕಿದೆ. ಈ ಎರಡೂ ನಗರಗಳ ನಡುವೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ ಅಗತ್ಯ ಇದೆ. ಬಂದರು ನಗರ ಮಂಗಳೂರಿಗೆ ಸಂಪರ್ಕ ಮಾಡುವುದರಿಂದ ಅನೇಕ ಪ್ರಯೋಜನಗಳು ಆಗಲಿವೆ. ಇದು ಕೂಡ ನಮ್ಮ ಆದ್ಯತೆ. ತುಮಕೂರು- ಚಿತ್ರದುರ್ಗ- ದಾವಣಗೆರೆ ಮಾರ್ಗದಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗ ಏಕಪಥವಾಗಿರುವ ಈ ಮಾರ್ಗವನ್ನು ಜೋಡಿಹಳಿ ಮಾಡಬೇಕು ಬೇಡಿಕೆ ಇದ್ದು, ಇದನ್ನು ಕೂಡ ಪರಿಗಣಿಸಲಾಗುವುದು ಎಂದು ಹೇಳಿದರು.

ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು:


ಕಿತ್ತೂರು ಕರ್ನಾಟಕ ಭಾಗದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಬೇಕು ಎಂದು ಸಚಿವ ಎಂ.ಬಿ.ಪಾಟೀಲ ಬೇಡಿಕೆ ಇಟ್ಟಿದ್ದಾರೆ. ಇನ್ನು ೩-೪ ತಿಂಗಳಲ್ಲಿ ಅದು ನನಸಾಗಲಿದೆ. ವಂದೇ ಭಾರತ್ ರೈಲಿಗೆ ಬದಲಾಗಿ ಸ್ಲೀಪರ್ ರೈಲು ಓಡಿಸಲಾಗುವುದು. ಈ ಕುರಿತು ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲದೆ, ಬೆಂಗಳೂರು- ವಿಜಯಪುರ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಮಾಡಲಾಗುವುದು. ಜತೆಗೆ ಇಲ್ಲಿರುವ ಸಣ್ಣಪುಟ್ಟ ತೊಂದರೆಗಳನ್ನು ನಿವಾರಿಸಲಾಗುವುದು. ಅಲ್ಲದೆ ಐಟಿ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿಯನ್ನು ಬೆಸೆಯಲು ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸಬೇಕು ಎನ್ನುವ ಬೇಡಿಕೆ ಸೂಕ್ತವಾಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಎಲ್.ಸಿ. ಗೇಟ್ ಇರೋದಿಲ್ಲ:

ಬಹುದಿನಗಳ ಬೇಡಿಕೆ ಆಗಿದ್ದ ಚನ್ನಪಟ್ಟಣ ಮೇಲ್ಸೇತುವೆ ನಿರ್ಮಾಣ ಆಗಿದೆ. ಕಳೆದ ೧೨ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಈಗ ಪೂರ್ಣಗೊಂಡಿದೆ. ದೇಶದಲ್ಲಿ ಸಂಪೂರ್ಣ ಎಲ್.ಸಿ ಗೇಟ್ ಮುಕ್ತ ಮಾಡಬೇಕು ಎನ್ನುವುದು ಪ್ರಧಾನಿಗಳ ಕನಸು. ಈಗಾಗಲೇ ಅರ್ಧದಷ್ಟು ಎಲ್.ಸಿ.ಗೇಟ್ ಗಳ ತೆಗೆದು ಮೇಲ್ಸೇತುವೆ ನಿರ್ಮಿಸಲಾಗಿದೆ. ಹಿಂದಿನ ಸರ್ಕಾರದಲ್ಲಿ ಆಗದ ಸಾಕಷ್ಟು ಕೆಲಸಗಳು ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ. ಇನ್ನೆರಡು ವರ್ಷದಲ್ಲಿ ಬೆಂಗಳೂರಿನ ಸುತ್ತಮುತ್ತ ಯಾವುದೇ ಎಲ್.ಸಿ ಗೇಟ್ ಇರೋದಿಲ್ಲ ಎಂದು ಹೇಳಿದರು.

ರಾಜ್ಯದಲ್ಲೇ ವಂದೇ ಭಾರತ್ ರೈಲು ಹೆಚ್ಚು:

ಕರ್ನಾಟಕದಲ್ಲಿ ೧೩ ಒಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಅತಿ ಹೆಚ್ಚು ವಂದೇ ಭಾರತ್ ರೈಲು ಸಂಚರಿಸುತ್ತಿರುವುದು ಕರ್ನಾಟಕ ರಾಜ್ಯವಾಗಿದೆ. ಉತ್ತರ ಕರ್ನಾಟಕ ಭಾಗದ ಕಡೆಗೆ ಮತ್ತಷ್ಟು ರೈಲಿಗೆ ಮನವಿ ಇದೆ, ಅದನ್ನೂ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ರೈಲಿನ ಸ್ಲೀಡ್ ೧೬೦ಕ್ಕೆ ಏರಲಿದೆ. ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಗೆ ಸಂಪರ್ಕಿಸಲು ಸ್ಪೀಡ್ ರೈಲು ಬರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ್, ಸಂಸದ ಡಾ.ಸಿ.ಎನ್.ಮಂಜುನಾಥ, ಶಾಸಕ ಯೋಗೀಶ್ವರ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಎ.ಕೆ.ಗುಪ್ತ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕಾತರಕಿ, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಇತರರಿದ್ದರು.

ಬಾಕ್ಸ್......................

ಸಚಿವರಿಬ್ಬರು ವಿಶೇಷ ರೈಲಿನಲ್ಲಿ ಪ್ರಯಾಣ:

ರೈಲ್ವೆ ಮೂಲಸೌಕರ್ಯದ ಗುಣಮಟ್ಟ, ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಬಳಸಲಾಗುವ SPIಅ (Seಟಜಿ-Pಡಿoಠಿeಟಟeಜ Iಟಿsಠಿeಛಿಣioಟಿ ಅಚಿಡಿ) ಎಂಬ ವಿಶೇಷ ರೈಲ್ವೆ ಪರಿಶೀಲನಾ ವಾಹನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ. ಪಾಟೀಲ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಚನ್ನಪಟ್ಟಣದವರೆಗೆ ಪ್ರಯಾಣ ಬೆಳೆಸಿದರು. ಬಳಿಕ ಅದೇ ರೈಲಿನಲ್ಲಿ ವಾಪಸ್ಸಾದರು.

ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಯೋಜನೆಗಳ ಕುರಿತು ಇಬ್ಬರು ಸಚಿವರು ಚರ್ಚೆ ನಡೆಸಿದರು.

ಬಾಕ್ಸ್.....................

ಯೋಗೇಶ್ವರ್ ಮನಸ್ಸು ನಮ್ಮ ಕಡೆ ಇದೆ: ಸೋಮಣ್ಣ

ಚನ್ನಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅನಿವಾರ್ಯವಾಗಿ ಕಾಂಗ್ರೆಸ್ ಸೇರಿ ಶಾಸಕರಾಗಿದ್ದಾರೆ. ಆದರೆ ಅವರ ಮನಸ್ಸೆಲ್ಲ ನಮ್ಮ ಕಡೆ ಇದೆ ಎಂದು ಸಚಿವ ಸೋವಣ್ಣ ತಿಳಿಸಿದರು.

ತಾಲೂಕಿನ ಎಲೇಕೇರಿ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕಷ್ಟಕಾಲದಲ್ಲಿ ಯಾರದ್ದಾದರೂ ಮನೆಗೆ ಹೋಗುವ ಕೆಲ ಮಂದಿಯಲ್ಲಿ ಮೊದಲಿಗರು ಸಿ.ಪಿ.ಯೋಗೇಶ್ವರ್. ಎರಡು ಕಡೆನೂ ನಾನು ಸೋತಾಗ ನಮ್ಮ ಮನೆಗೆ ಮೊದಲು ಬಂದದ್ದೇ ಯೋಗೇಶ್ವರ್. ನಾನು ಮತ್ತು ಡಾ.ಮಂಜುನಾಥ್ ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ, ಏನೇನೋ ಯಡವಟ್ಟು ಆಯಿತು. ಆನಂತರ ಅವರು ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಸೇರಿ ಶಾಸಕರಾಗಿದ್ದಾರೆ. ಆದರೆ ಮನಸ್ಸೆಲ್ಲ ನಮ್ಮ ಕಡೆಯೇ ಇದೆ. ಅವರು ಎರಡು ಯೋಜನೆಗಳ ಕುರಿತು ಮನವಿ ನೀಡಿದ್ದಾರೆ ಈ ಬಗ್ಗೆ ಶೀಘ್ರವೇ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

ಬಾಕ್ಸ್‌.........................

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಿ: ಸೋಮಣ್ಣ

ಚನ್ನಪಟ್ಟಣ: ಯಾವುದೋ ಒಂದು ಉಪನಗರಕ್ಕಾಗಿ ಅನ್ನದಾತ ರೈತರಿಗೆ ನೋವು ಕೊಡುವುದು ಬೇಡ. ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವ ಬದಲು, ಈ ಟೌನ್‌ಶಿಪ್ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಅನಾನುಕೂಲ ಮಾಡಿ ಯೋಜನೆ ಜಾರಿಗೊಳಿಸುವುದು ಬೇಡ. ಬಿಡದಿ ಟೌನ್‌ಶಿಪ್ ವಿಚಾರವಾಗಿ ಈಗಾಗಲೇ ನಾನು ಸಾಕಷ್ಟು ಮಾತನಾಡಿದ್ದೇನೆ. ಭಾನುವಾರವಷ್ಟೇ ಸಿಎಂ ಸಹೋದರ ಡಿ.ಕೆ.ಸುರೇಶ್ ಜೊತೆಯೂ ಫೋನ್‌ನಲ್ಲಿ ಚರ್ಚಿಸಿದ್ದೇನೆ. ಡಿ.ಕೆ.ಶಿವಕುಮಾರ್ ಸಿಎಂ ಆಗಿ ಒಂದು ತಿಂಗಳಾಗಿದೆ. ನೀವು ಸಿಎಂ ಆಗಿ ಯಾವುದೇ ಹೊಸ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಅದರ ಬದಲು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಿ ಎಂದು ಸೋಮಣ್ಣ ಸಲಹೆ ನೀಡಿದರು.

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರು ಬೇಡ ಎಂದ ತಕ್ಷಣವೇ ಈ ಯೋಜನೆಯನ್ನು ಕೈಬಿಟ್ಟಿದ್ದರು. ಇವತ್ತು ನೀವ್ಯಾಕೆ ಈ ಯೋಜನೆಗಾಗಿ ಹಠ ಮಾಡುತ್ತಿದ್ದೀರಿ, ಯಾವುದೋ ಒಂದು ಉಪನಗರಕ್ಕಾಗಿ ಅನ್ನದಾತ ರೈತರಿಗೆ ನೋವು ಕೊಡುವುದು ಬೇಡ. ನಮ್ಮ ಜಿಲ್ಲೆಯವರೇ ಇಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ ಎಂಬ ಹೆಮ್ಮೆಯಿದೆ. ಅವರು ಮೊದಲು ಬಿಡದಿ ಭಾಗದ ಬೈರಮಂಗಲ ಕೆರೆ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಿ. ಹಠಮಾರಿ ಧೋರಣೆಯನ್ನು ಬಿಟ್ಟು, ವಿವಾದಿತ ಯೋಜನೆಯನ್ನು ಕೈಬಿಡಿ. ಇಡೀ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದರು.

ಪೊಟೋ೨೯ಸಿಪಿಟಿ೧:

ಚನ್ನಪಟ್ಟಣದ ಎಲೇಕೇರಿ ಮೇಲ್ಸೇತುವೆ ಉದ್ಘಾಟನಾ ಸಮಾರಂಭವನ್ನು ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸಿದರು. ಸಂಸದ ಡಾ.ಮಂಜುನಾಥ್, ಶಾಸಕ ಯೋಗೇಶ್ವರ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಎ.ಕೆ.ಗುಪ್ತ ಮತ್ತಿತರರು ಉಪಸ್ಥಿತರಿದ್ದರು.