ಕಿಕ್ಕೇರಿ:

ಮಕ್ಕಳಿಗೆ ಎಷ್ಟು ಬಾರಿ ಪಲ್ಸ್ ಪೋಲಿಯೋ ಹನಿ ಹಾಕಿಸಿದ್ದರೂ ಮತ್ತೊಮ್ಮೆ ಲಸಿಕೆ ಹಾಕಿಸಲು ಪೋಷಕರು ಮರೆಯಬಾರದು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್ ಹೇಳಿದರು.

ಇಲ್ಲಿನ 3ನೇ ವೃತ್ತದ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿ ಮಾತನಾಡಿ, ಮಕ್ಕಳಿಗೆ ಜೀವಾಮೃತವಾಗಿ ಹನಿಯಿದ್ದು 3 ದಿನಗಳವರೆಗೆ ನಡೆಯುವ ಲಸಿಕೆ ಕಾರ್ಯಕ್ರಮಕ್ಕೆ ಸಹಕರಿಸಿ ಎಂದರು.

ಮಕ್ಕಳಿಗೆ ಅಂಗವೈಕಲ್ಯತೆ ಎನ್ನುವುದು ಶಾಪವಲ್ಲ. ಮಕ್ಕಳಿಗೆ ಪೋಲಿಯೋ ವಿರುದ್ಧ ಲಸಿಕೆ ಹಾಕಿಸಿದ್ದಲ್ಲಿ ಇಂತಹ ಗಂಡಾಂತರ ಬರಲಾರದು. ಲಿಂಗತಾರತಮ್ಯವಿಲ್ಲದೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಲೇಬೇಕು ಎಂದರು.

ಟಿಎಪಿಸಿಎಂಎಸ್ ನಿರ್ದೇಶಕ ಕೆ.ಬಿ.ಮಧು ಮಾತನಾಡಿ, ಸೋಮವಾರದಿಂದ 2 ದಿನಗಳು ಮನೆ, ಬಸ್‌ನಿಲ್ದಾಣದಂತಹ ಪ್ರಮುಖ ಕೇಂದ್ರದಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಕಬ್ಬು ಕಟಾವು, ಕೂಲಿ ಕಾರ್ಮಿಕರು ಇರುವಂತಹ ಜನಪ್ರದೇಶಗಳಲ್ಲಿನ ವಲಸಿಗ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸಂಘ ಸಂಸ್ಥೆ, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಆಶಾ ಕಾರ್ಯಕರ್ತೆ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ರಮೇಶ್ ಮತ್ತಿತರರಿದ್ದರು.


ಜೂ.೩೦ರಂದು ನಾಡಪ್ರಭು ಕೆಂಪೇಗೌಡ ಜಯಂತಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ನಾನಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಕಾರ್ಯಕ್ರಮವನ್ನು ಜೂ.೩೦ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ತಿಳಿಸಿದರು.ಜಯಂತಿ ಹಿನ್ನಲೆಯಲ್ಲಿ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಗೆ ಅಂದು ಬೆಳಗ್ಗೆ ೯.೩೦ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಚಾಲನೆ ನೀಡಲಾಗುವುದು. ಮೆರವಣಿಗೆಯು ಜೆ.ಸಿ ವೃತ್ತ, ಮಹಾವೀರ ವೃತ್ತ, ವಿವಿ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಘನುಪಸ್ಥಿತಿಯಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಹಾಗೂ ಹವಾಮಾನ ವೈಪರಿತ್ಯ ಮಂಡ್ಯ ಜಿಲ್ಲಾ ಮೇಲುಸ್ತುವಾರಿ ರಾಮಲಿಂಗರೆಡ್ಡಿ ಉದ್ಘಾಟಿಸುವರು ಎಂದರು.ಶಾಸಕ ಪಿ.ರವಿಕುಮಾರ್‌ಗೌಡ ಅಧ್ಯಕ್ಷತೆ ವಹಿಸಲಿದ್ದು, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಎಸ್ಸಿ,ಎಸ್ಟಿ ಆಯೋಗದ ಅಧ್ಯಕ್ಷ ಡಾ.ಮೂರ್ತಿ, ಜಿಲ್ಲೆಯ ಎಲ್ಲ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಇತರ ಮುಖಂಡರು ಭಾಗವಹಿಸುವರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ, ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ಧನಂಜಯ, ಮುತ್ತೇಶ್‌ಗೌಡ, ಜಿಲ್ಲಾ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ತಲಾ ಓರ್ವ ಪ್ರಗತಿಪರ ರೈತರು, ಪಿಯುಸಿಯ ೩ ವಿಭಾಗಗಳಿಂದ ತಲಾ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಯಂತೆ ೭ ತಾಲೂಕಿನಿಂದ ಸೇರಿ ೨೧ ಮಂದಿ, ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ೨೧ ಮಂದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ೩ ಎಸ್ಸೆಸ್ಸೆಲ್ಸಿ ಹಾಗೂ ೯ ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸಿ.ರವೀಂದ್ರ, ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಉಪಾಧ್ಯಕ್ಷ ಶಿವಶಂಕರ್, ವೇಣುಗೋಪಾಲ್, ಎಸ್.ನಾರಾಯಣ್, ಬಿ.ಆರ್.ಕೃಷ್ಣೇಗೌಡ, ಎಲ್.ಕೃಷ್ಣ ಇದ್ದರು.