ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಬಳಿ ಕ್ರೇನ್ ಯಂತ್ರದ ಮೂಲಕ ಬೃಹತ್ ಹಾರ ಸುರೇಶ್ ಗೌಡರ ಪರ ಹಾಕಿ ಜಯಘೋಷ ಕೂಗಿದರು. ನಂತರ ಬೈಕ್‌ರ್‍ಯಾಲಿ ಮೂಲಕ ಪಟ್ಟಣಕ್ಕೆ ಕರೆತಂದರು.
ಕಳೆದ ಫೆ.21ರ ರಾತ್ರಿ ಮದ್ದೂರು ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನಾಗಮಂಗಲಕ್ಕೆ ವಾಪಸ್ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಪರಿಣಾಮ ಮಾಜಿ ಶಾಸಕ ಸುರೇಶ್‌ಗೌಡ ಸೇರಿದಂತೆ ಚಾಲಕ ಹಾಗೂ ಅಂಗರಕ್ಷಕ ಗಾಯಗೊಂಡು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಎರಡು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು.ಪಕ್ಷದ ಕಾರ್ಯಕರ್ತರ ಸಮಸ್ಯೆ ಆಲಿಸಲು ಸೋಮವಾರ ಬೆಳಗ್ಗೆ ತಾಲೂಕಿಗೆ ಮಾಜಿ ಶಾಸಕ ಸುರೇಶ್‌ಗೌಡ ಭೇಟಿ ನೀಡುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಬಳಿ ಸೇರಿದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಸುರೇಶ್‌ಗೌಡ ಮತ್ತು ಪತ್ನಿ ಗೀತಾ ಸುರೇಶ್‌ಗೌಡ ಅವರಿಗೆ ಕ್ರೇನ್ ಯಂತ್ರದ ಮೂಲಕ ಬೃಹತ್ ಹಾರ ಹಾಕಿ ಜಯಘೋಷದೊಂದಿಗೆ ಅದ್ಧೂರಿ ಸ್ವಾಗತ ಕೋರಿ ಬರಮಾಡಿಕೊಂಡರು. ನಂತರ ನೂರಾರು ಬೈಕ್ ರ್‍ಯಾಲಿ ಮೂಲಕ ಬೆಳ್ಳೂರು ಕ್ರಾಸ್ ಮಾರ್ಗವಾಗಿ ಪಟ್ಟಣಕ್ಕೆ ಕರೆತಂದರು.
ನಂತರ ಸುರೇಶ್‌ಗೌಡ ದಂಪತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ದು ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಪೂರ್ಣ ಗುಣಮುಖರಾಗಿ ಜನಸೇವೆ ಮಾಡಲು ಸುರೇಶ್‌ಗೌಡರಿಗೆ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಇನ್ನೂ ಎರಡು ವಾರಗಳ ಕಾಲ ಫಿಜಿಯೋ ಥೆರಪಿ ಮಾಡಿಸಬೇಕಿದೆ. ಮೂರ್‍ನಾಲ್ಕು ದಿನಗಳ ನಂತರದಿಂದ ತಾಲೂಕಿನಲ್ಲಿ ಲಭ್ಯವಿದ್ದು ಜೆಡಿಎಸ್ ಕಾರ್ಯಕರ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಜೊತೆಗೆ ವಿರೋಧ ಪಕ್ಷದವರಾಗಿ ಪರಿಪೂರ್ಣ ಕೆಲಸ ಮಾಡಲಾಗುವುದು ಎಂದರು.