ಬ್ಯಾಡಗಿಯ ಅಹೋರಾತ್ರಿ ಧರಣಿಗೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬೆಂಬಲ

KannadaprabhaNewsNetwork | Published : Jun 26, 2024 12:31 AM

ಸಾರಾಂಶ

ಬ್ಯಾಡಗಿ ಪಟ್ಟಣದ ನಿವೇಶನರಹಿತ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ನೂರಾರು ಫಲಾನುಭವಿಗಳೊಂದಿಗೆ ಸೋಮವಾರದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೆ ದಿನಕ್ಕೆ (ಮಂಗಳವಾರ) ಕಾಲಿಟ್ಟಿದೆ ಮುಂದುವರೆಯಿತು.

ಬ್ಯಾಡಗಿ: ಪಟ್ಟಣದ ನಿವೇಶನರಹಿತ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ನೂರಾರು ಫಲಾನುಭವಿಗಳೊಂದಿಗೆ ಸೋಮವಾರದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೆ ದಿನಕ್ಕೆ (ಮಂಗಳವಾರ) ಕಾಲಿಟ್ಟಿದೆ ಮುಂದುವರೆಯಿತು.

ಸೋಮವಾರ ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್‌ ಫಿರೋಜ್ ಶಾ ಸೋಮನಕಟ್ಟಿ ಸೇರಿದಂತೆ ಮುಖ್ಯಾಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾಗಿದ್ದರೂ ಆದರೆ ಯಾವುದೇ ಫಲಪ್ರದ ಕಾಣದೇ ಕೈಚಲ್ಲಿದ್ದರು. ಅತ್ತ ಯಾವುದೇ ಭರವಸೆ ಕಾಣದ ಫಲಾನುಭವಿಗಳು ಪ್ರತಿಭಟನೆಯನ್ನು ಮಂಗಳವಾರಿಸಿದ್ದು, ಪುರಸಭೆ ಆವರಣದಲ್ಲಿಯೇ ಪ್ರತಿಭಟನಾಕಾರ ಮಹಿಳೆಯರು ಅಡುಗೆ ಮಾಡಿಕೊಂಡು ಇಡೀ ರಾತ್ರಿ ಪೆಂಡಾಲ್‌ನಲ್ಲಿಯೇ ಮಲಗಿ ಸಮಯ ಕಳೆದಿದ್ದು ಪ್ರತಿಭಟನೆಯ ಮತ್ತೊಂದು ವಿಶೇಷ.

ಮಾಜಿ ಶಾಸಕ ವಿರೂಪಾಕ್ಷಪ್ಪ ಭೇಟಿ: ಹೋರಾಟದ ಸ್ಥಳಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿ ಫಲಾನುಭವಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಪಟ್ಟಾಗಳನ್ನು ನೀಡಲು ಸಿದ್ಧನಾಗಿದ್ದೆ, ಆದರೆ ಕ್ಷೇತ್ರದಲ್ಲಿ ನಾನು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಂಗಾಲಾಗಿದ್ದ ಕೆಲ ಕಾಣದ ಕೈಗಳು ನಮ್ಮದೇ ಪಕ್ಷದ ಪುರಸಭೆ ಸದಸ್ಯರ ಮೂಲಕ ಬ್ರೇಕ್ ಹಾಕಿಸಿ ಪಟ್ಟಾ ನೀಡದಂತೆ ಹುನ್ನಾರ ನಡೆಸಿದ್ದರ ಪರಿಣಾಮ ನಿವೇಶನ ಹಂಚಿಕೆಯಾಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.ಆಶ್ರಯ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಬಡವರಿಗಾಗಿಯೇ ಖರೀದಿ ಮಾಡಲಾಗಿರುವ ಜಾಗೆಯನ್ನು ವಿತರಣೆ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ. ಇನ್ನೊಂದೆಡೆ ಪಟ್ಟಣದ ಬಸವೇಶ್ವರ ನಗರದ 19 ಎಕರೆ ಪುರಸಭೆ ಜಾಗೆಯಲ್ಲಿ 40 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಸಹ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದೀರಿ, ಮಲ್ಲೂರ ರಸ್ತೆಯಲ್ಲಿ ಜಾಗ ಕೊಡಲು ಆಗದಿದ್ದರೇ ಬಸವೇಶ್ವರ ನಗರದಲ್ಲಿ ಖಾಲಿ ಇರುವ ಜಾಗೆಗಳನ್ನು ನಿವೇಶನಕ್ಕಾಗಿ ಹೋರಾಟ ಮಾಡುತ್ತಿರುವ ಬಡವರಿಗೆ ಕೊಡಿ ಎಂದು ಆಗ್ರಹಿಸಿದರು.

ಪುರಸಭೆಯಲ್ಲಿ ಗೋಲಮಾಲ್‌: ಪರೀಧಾಭಾನು ನದೀಮುಲ್ಲಾ ಮಾತನಾಡಿ, ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆದಿಲ್ಲ. ಯಾವುದೇ ಪತ್ರಿಕೆ ಅಥವಾ ನೋಟಿಸ್ ಬೋರ್ಡಗಳಲ್ಲಿ ಫಲಾನುಭವಿಗಳ ಹೆಸರು ಪ್ರಕಟಿಸಿಲ್ಲ, 30 ಸಾವಿರ ಹಣ ತುಂಬಿಸಿಕೊಳ್ಳುವುದನ್ನು 419 ಫಲಾನುಭವಿಗಳಿಗೆ ಮೊಟಕುಗೊಳಿಸದೇ

159 ಜನರಿಂದ ಹೆಚ್ಚುವರಿ ಜನರಿಂದ ಹಣ ಕಟ್ಟಿಸಿಕೊಂಡಿಸಿದ್ದೇಕೆ ಇವರಿಗೆ ಕೊಡಲು ನಿವೇಶನಗಳೆಲ್ಲಿವೆ? ಪುರಸಭೆಯಲ್ಲಿ ಗೋಲಮಾಲ್ ನಡೆದಿದ್ದು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.

ನಿಮ್ಮ ಜೊತೆಗಿದ್ದೇನೆ: ಅರ್ಹ ಬಡವರಿಗೆ ನಿವೇಶನ ಸಿಗಬೇಕು ಎಂದು ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಆದರೆ ಇದರಲ್ಲಿಯೂ ನನ್ನ ಗಮನಕ್ಕೆ ಬಾರದಂತೆ ಆಯ್ಕೆಯಲ್ಲಿ ತಪ್ಪುಗಳಾಗಿದ್ದರೇ ಕೂಡಲೇ ಅದನ್ನು ಹಾಲಿ ಶಾಸಕರ ಗಮನಕ್ಕೆ ತಂದು ಮುಖ್ಯಾಧಿಕಾರಿಗಳು ಸರಿಪಡಿಸಬೇಕು ಮತ್ತು ಅನುಮೋದನೆಗೊಂಡಿರುವ ಪಟ್ಟಾಗಳನ್ನು ಬಡವರಿಗೆ ಹಂಚುವ ಕೆಲಸವನ್ನು ಮಾಡುವಂತೆ ಸೂಚಸಿದರು. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ನಿಮ್ಮ ಜೊತೆ ನಾನಿದ್ದೇನೆ ಶಾಸಕರಿಗೂ ದೂರವಾಣಿ ಕರೆ ಮಾಡಿ ಸಮಸ್ಯೆ ಪರಿಹರಿಸಲು ತಿಳಿಸುವೆ ಎಂದು ಭರವಸೆ ನೀಡಿದರು.

ಈ ವೇಳೆ ಪುರಸಭೆ ಸದಸ್ಯರಾದ ಚಂದ್ರಣ್ಣ ಶೆಟ್ಟರ, ಫಕ್ಕೀರಮ್ಮ ಛಲವಾದಿ, ವಿನಾಯಕ ಹಿರೇಮಠ, ಶಿವರಾಜ ಅಂಗಡಿ, ಪುರಸಭೆ ಮುಖ್ಯಾಧಿಕಾರಿ ವಿನಕುಮಾರ ಹೊಳೆಪ್ಪಗೋಳ, ಮುಖಂಡರಾದ ಶಿವಬಸಪ್ಪ ಕುಳೆನೂರ, ಸುರೇಶ ಯತ್ನಳ್ಳಿ, ನಿಂಗಪ್ಪ ಬಟ್ಟಲಕಟ್ಟಿ ಹಾಗೂ ಹೋರಾಟಗಾರರಾದ ಪಾಂಡು ಪುತಾರ, ವಿನಾಯಕ ಕಂಬಳಿ, ಫರಿದಾಬಾನು ನದೀಮುಲ್ಲಾ, ಮಮ್ತಾಜ ಬೇಟಗೇರಿ, ಮಂಜುಳಾ ಬಂಡಿವಡ್ಡರ ಜಮೀಲಾಬಿ ತಾಳಿಕೋಟಿ ಸುಧಾ ಆಡಿನವರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಾರದ ಜಿಲ್ಲಾಧಿಕಾರಿಗಳು: ನಿವೇಶನಕ್ಕಾಗಿ ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳ ನಡೆಯನ್ನು ಖಂಡಿಸಿ ಪ್ರತಿಭಟನಕಾರರು ಆಕ್ರೋಶ ಹೊರ ಹಾಕಿದರು, ಆದರೆ ಯಾರ ಮನವೊಲಿಕೆಗೂ ಜಗ್ಗದ ಮಹಿಳೆಯರು ಆಹೋರಾತ್ರಿ ಧರಣಿಯನ್ನು ಮೂರನೇ ದಿನಕ್ಕೆ ಮುಂದುವರೆಸಿದರು.

Share this article