ಜೋಳಿಗೆ ಹಿಡಿವ ಹೇಳಿಕೆಗೆ ಮಾಜಿ ಶಾಸಕರ ಜಟಾಪಟಿ!

KannadaprabhaNewsNetwork |  
Published : Sep 09, 2026, 03:00 AM IST
ಪೋಟೋ: 8ಜಿಎಲ್ಡಿ2-  ರಾಜಶೇಖರ ಶೀಲವಂತ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ ಕಂದಗಲ್ ಹನುಮಂತರಾಯರ ಹೆಸರಿನ ಗುಳೇದಗುಡ್ಡ ಪಟ್ಟಣದ ರಂಗಮಂದಿರ ಇದೀಗ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ. ಆವರಣದಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು, ಸಾರ್ವಜನಿಕರು ಮಲವಿಸರ್ಜನೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ ಕಂದಗಲ್ ಹನುಮಂತರಾಯರ ಹೆಸರಿನ ಗುಳೇದಗುಡ್ಡ ಪಟ್ಟಣದ ರಂಗಮಂದಿರ ಇದೀಗ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ. ಆವರಣದಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು, ಸಾರ್ವಜನಿಕರು ಮಲವಿಸರ್ಜನೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ರಂಗಮಂದಿರದ ದುಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ನಾನು ಜಂಗಮನಿದ್ದೇನೆ. ಜೋಳಿಗೆ ಹಾಕಿ ರಂಗಮಂದಿರದ ಅಭಿವೃದ್ಧಿ ಮಾಡುತ್ತೇನೆ ಎಂದು ಇತ್ತೀಚೆಗೆ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಬಿಜೆಪಿ ಮಾಜಿ ಶಾಸಕ ರಾಜಶೇಖರ ಶೀಲವಂತ ತೀವ್ರ ವ್ಯಂಗ್ಯವಾಡಿದ್ದಾರೆ. ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮದೇ ಸರ್ಕಾರ, ತಾವೇ ಸ್ವಪಕ್ಷದ ಜಿಲ್ಲಾಧ್ಯಕ್ಷರು, ತಮ್ಮದೇ ಪಕ್ಷದ ಭೀಮಸೇನ ಚಿಮ್ಮನಕಟ್ಟಿ ಶಾಸಕರಾಗಿದ್ದಾರೆ. ಇಷ್ಟಿದ್ದರೂ ಭಿಕ್ಷೆ ಬೇಡಿ ರಂಗಮಂದಿರ ಪೂರ್ಣಗೊಳಿಸುವುದು ನಾಚಿಕೆಗೇಡಿನ ಸಂಗತಿ. ಇದು ದುರ್ದೈವದ ವಿಚಾರ ಎಂದು ಟೀಕಿಸಿದ್ದಾರೆ.

ಶೀಲವಂತ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಂಜಯ್ಯನಮಠ, ನಾನು ತಿಂಗಳಲ್ಲಿ ಎರಡು-ಮೂರು ಬಾರಿ ಗುಳೇದಗುಡ್ಡಕ್ಕೆ ಬಂದು ಹೋಗುತ್ತೇನೆ. ಆದರೆ ದಿನನಿತ್ಯ ಗುಳೇದಗುಡ್ಡದಲ್ಲೇ ಇರುವ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಕಂದಗಲ್ ಹನುಮಂತರಾಯರ ಬಯಲು ರಂಗಮಂದಿರದತ್ತ ಕಣ್ಣೆತ್ತಿಯೂ ನೋಡದಿರುವುದು ಯಾವ ರೀತಿಯ ನಾಚಿಕೆಗೇಡಿನ ಸಂಗತಿ ಎಂದು ಪ್ರಶ್ನಿಸಿದ್ದಾರೆ.

ರಂಗಮಂದಿರದ ದುಸ್ಥಿತಿಗೆ ಯಾರು ಕಾರಣ, ಯಾರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದನ್ನು ಗುಳೇದಗುಡ್ಡದ ಜನತೆಯೇ ತೀರ್ಮಾನಿಸಲಿ” ಎಂದು ನಂಜಯ್ಯನಮಠ ಸವಾಲು ಹಾಕಿದ್ದಾರೆ.

ಮಾಜಿ ಶಾಸಕರಿಬ್ಬರ ನಡುವಿನ ವಾಕ್ಸಮರ ತೀವ್ರಗೊಂಡಿರುವ ಬೆನ್ನಲ್ಲೇ, ಕಂದಗಲ್ ಹನುಮಂತರಾಯರ ಹೆಸರಿನ ರಂಗಮಂದಿರ ಮಾತ್ರ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಯತ್ತ ಸಾಗುತ್ತಿದೆ. ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ, ಜೆಡಿಎಸ್ ಸೇರಿದಂತೆ ವಿರೋಧ ಪಕ್ಷಗಳು, ರಂಗ ಸಂಘಟನೆಗಳು ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ರಂಗಮಂದಿರದ ಅಭಿವೃದ್ಧಿ ವಿಚಾರದಲ್ಲಿ ಅಗತ್ಯ ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕನ್ನಡ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ ಕಂದಗಲ್ ಹನುಮಂತರಾಯರ ಹೆಸರಿನ ರಂಗಮಂದಿರದ ಈ ದುಸ್ಥಿತಿ ಮುಂದುವರಿದರೆ ಅದರ ಗೌರವಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಗೆ ಐಟಿ ಕಂಪನಿ ತರಲು ಪ್ರಯತ್ನ
ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ