ಕೊಪ್ಪಳ: ಕೊಪ್ಪಳ ಜಿಲ್ಲಾ ಪಂಚಾಯಿತಿಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ, ಕೇವಲ 27ನೇ ವಯಸ್ಸಿನ ವಿಧಾನಪರಿಷತ್ ಪ್ರವೇಶ ಮಾಡಿದ್ದ ಕರಿಯಣ್ಣ ಸಂಗಟಿ (61) ಅವರು ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಅಫೋಲೋ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು.
ಜನಪರ ಹೋರಾಟದೊಂದಿಗೆ ಸದಾ ಗುರುತಿಸಿಕೊಳ್ಳುತ್ತಿದ್ದ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಪರಮಾಪ್ತರಾಗಿದ್ದರು.
ಕೊಪ್ಪಳ ಜಿಪಂ ರಚನೆಯಾದ ಮೊದಲ ಅವಧಿಯ ಪ್ರಥಮ ಅಧ್ಯಕ್ಷರಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕೃಪೆಯಿಂದ ನೇರವಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರು.ವಿಧಾನಪರಿಷತ್ ಅವಧಿ ಮುಗಿದ ಬಳಿಕ ಅವರಿಗೆ ರಾಜಕೀಯ ಮರುಜನ್ಮ ದೊರೆಯಲೇ ಇಲ್ಲ. ಆದರೆ, ನಿತ್ಯವೂ ಸಾರ್ವಜನಿಕರ ಜೀವನದಲ್ಲಿಯೇ ಕಾಲಕಳೆದ ಅವರು, ಹೋರಾಟ, ರೈತ ಪರ ಧ್ವನಿಗೆ ಮುಂಚೂಣಿಯಲ್ಲಿ ಇರುತ್ತಿದ್ದರು.ಕೊಪ್ಪಳ ತಾಲೂಕಿನ ಯಲಮಗೇರಾ ಗ್ರಾಮದವರಾಗಿದ್ದ ಅವರು, ಇರಕಲ್‌ಗಡ ಗ್ರಾಮ ವ್ಯಾಪ್ತಿಯಲ್ಲಿನ ಕರಡಿ ಹಾವಳಿಯ ವಿರುದ್ಧ ರೈತರ ಪರವಾಗಿ ಅನೇಕ ಹೋರಾಟ ಮಾಡಿದ್ದಾರೆ. ಉಳುಮೆ ಮಾಡುವ ಅರಣ್ಯ ಭೂಮಿಯನ್ನು ರೈತರಿಗೆ ಕೊಡಿಸಲು ಹಲವು ವರ್ಷ ಹೋರಾಟ ಮಾಡಿದ್ದಾರೆ. ಇತ್ತೀಚೆಗೆ ಇರಕಲ್ಲಗಡ ವ್ಯಾಪ್ತಿಯಲ್ಲಿ ಪರಮಾಣು ಸ್ಥಾವರ ಸ್ಥಾಪನೆಯಾಗುತ್ತದೆ ಎನ್ನುವ ಮಾಹಿತಿ ದೊರೆತ ಬಳಿಕ ಅದರ ವಿರುದ್ಧ ಬಹು ದೊಡ್ಡ ಹೋರಾಟ ಮಾಡಿದರು. ಈ ಭಾಗದ ರೈತರನ್ನು ಸಂಘಟಿಸಿ, ರಾಜ್ಯಮಟ್ಟದಲ್ಲಿಯೇ ಹೋರಾಟದ ಧ್ವನಿ ಮೊಳಗುವಂತೆ ಮಾಡಿದರಲ್ಲದೆ, ಪರಮಾಣು ಸ್ಥಾವರ ಸ್ಥಾಪನೆಗೆ ಅವಕಾಶ ನೀಡದಿರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗುವಂತೆ ಮಾಡಿದ್ದು ಇವರ ಹಿರಿಮೆ. ಇರಕಲ್‌ಗಡ ಭಾಗದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯ ನೀರು ತರುವಂತೆಯೂ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.ಸಂಗಟಿ ಅವರ ನಿಧನಕ್ಕೆ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜನಾರ್ದನ ರೆಡ್ಡಿ, ದೊಡ್ಡನಗೌಡ ಪಾಟೀಲ್, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಕೊಪ್ಪಳ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿದ್ದ ಡಾ. ಬಿ.ಕೆ. ರವಿ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು ಆಫೋಲೋ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವವೇ ನಿಧನವಾಗಿದ್ದರು. ಆಸ್ಪತ್ರೆಯ ಕಳೆದೊಂದು ತಿಂಗಳ ಬಿಲ್ ಬರೋಬ್ಬರಿ ₹26 ಲಕ್ಷ ಆಗಿದೆ. ಅದರಲ್ಲಿ ₹15 ಲಕ್ಷವನ್ನು ಪಾವತಿ ಮಾಡಿದ್ದು, ಉಳಿದ ₹11 ಲಕ್ಷ ಪಾವತಿ ಮಾಡಿದ ಬಳಿಕವೇ ಮೃತದೇಹ ಪಡೆಯುವಂತೆ ಷರತ್ತು ವಿಧಿಸಿದ್ದರಿಂದ ಹಣ ಹೊಂದಿಸಲು ನಾಲ್ಕಾರು ತಾಸು ಬೇಕಾಯಿತು. ಆ ಬಳಿಕವೇ ಮೃತದೇಹವನ್ನು ಕುಟುಂಬದ ವಶಕ್ಕೆ ನೀಡಲಾಯಿತು.
ಕರಿಯಣ್ಣ ಸಂಗಟಿ ಅಗಲಿಕೆ ನೋವು ತಂದಿದೆ. ಅವರ ಸೇವೆ ಇನ್ನೂ ಅಗತ್ಯವಿತ್ತು. ಆದರೆ, ಅನಾರೋಗ್ಯದಿಂದ ನಿಧನರಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಕರಿಯಣ್ಣ ಸಂಗಟಿ ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದರು. ಅವರು ಪಕ್ಷ ರಾಜಕಾರಣದಲ್ಲಿ ಇದ್ದರೂ ಯಾರನ್ನೂ ದ್ವೇಷಿಸಲಿಲ್ಲ. ರಾಜಕೀಯದಾಚೆ ಉತ್ತಮ ವ್ಯಕ್ತಿಗತ ಸಂಬಂಧವನ್ನು ಎಲ್ಲರೊಂದಿಗೆ ಹೊಂದಿದ್ದರು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.