ಸಾವಯವ ಕೃಷಿಯಲ್ಲಿ ಮಾಜಿ ಯೋಧ ಕೃಷ್ಣ ನಾಯಕ್ ಸಾಧನೆ

KannadaprabhaNewsNetwork |  
Published : May 22, 2026, 02:00 AM IST
20ಎಚ್ಎಸ್ಎನ್16 :  | Kannada Prabha

ಸಾರಾಂಶ

ಅರಸೀಕೆರೆ ನಗರದ ನಿವಾಸಿಯಾಗಿರುವ ಕೃಷ್ಣ ನಾಯಕ್ ಅವರು ತಾಲೂಕಿನ ಬಾಣಾವರ ಹೋಬಳಿಯ ಕುರುಬರಹಳ್ಳಿ ತಾಂಡ್ಯ ಸಮೀಪ ಸುಮಾರು ಹತ್ತು ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅರಿಶಿನ, ಗೆಣಸು ಹಾಗೂ ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸುತ್ತಿರುವ ಅವರು, ತೋಟದಲ್ಲೇ ಎರೆಹುಳು ಸಾಕಾಣಿಕೆ ಮೂಲಕ ಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ದೇಶದ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಕೃಷ್ಣ ನಾಯಕ್, ನಿವೃತ್ತಿಯ ಬಳಿಕ ಇದೀಗ ಕೃಷಿಕನಾಗಿ ಸಾವಯವ ಕೃಷಿಯಲ್ಲಿ ಮಾದರಿ ಸಾಧನೆ ಮಾಡುತ್ತಿದ್ದಾರೆ. ದೇಶ ರಕ್ಷಣೆಯ ಕರ್ತವ್ಯದಿಂದ ಭೂತಾಯಿಯ ಸೇವೆಯತ್ತ ಮುಖ ಮಾಡಿರುವ ಅವರ ಕೃಷಿ ವಿಧಾನ ಇದೀಗ ಅನೇಕರ ಗಮನ ಸೆಳೆಯುತ್ತಿದೆ.ಅರಸೀಕೆರೆ ನಗರದ ನಿವಾಸಿಯಾಗಿರುವ ಕೃಷ್ಣ ನಾಯಕ್ ಅವರು ತಾಲೂಕಿನ ಬಾಣಾವರ ಹೋಬಳಿಯ ಕುರುಬರಹಳ್ಳಿ ತಾಂಡ್ಯ ಸಮೀಪ ಸುಮಾರು ಹತ್ತು ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅರಿಶಿನ, ಗೆಣಸು ಹಾಗೂ ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸುತ್ತಿರುವ ಅವರು, ತೋಟದಲ್ಲೇ ಎರೆಹುಳು ಸಾಕಾಣಿಕೆ ಮೂಲಕ ಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ.

ತೋಟದಲ್ಲಿ ಬಿದ್ದ ಎಲೆಗಳು, ಸೊಪ್ಪು, ತರಗು ಸೇರಿದಂತೆ ಪ್ರಕೃತಿಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಜೊತೆಗೆ ಗಂಜಲ, ಸಗಣಿ ನೀರು ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಖರೀದಿಸಿ ಬೆಳೆಗಳಿಗೆ ಬಳಸಲಾಗುತ್ತಿದೆ. ಇದರ ಪರಿಣಾಮವಾಗಿ ಬೆಳೆಯ ಗುಣಮಟ್ಟ ಉತ್ತಮವಾಗಿದ್ದು, ಸಾವಯವ ಬಾಳೆಗೆ ಬೆಂಗಳೂರಿನಿಂದಲೇ ಖರೀದಿದಾರರು ಬಂದು ಮಾರುಕಟ್ಟೆ ಬೆಲೆಗಿಂತ ದ್ವಿಗುಣ ದರ ನೀಡಿ ಖರೀದಿಸುತ್ತಿದ್ದಾರೆ.ಬಾಳೆ ತೋಟದಲ್ಲಿ ಕಳೆ ನಿಯಂತ್ರಣಕ್ಕಾಗಿ ಅವರು ಅನುಸರಿಸಿರುವ ವಿಧಾನವೂ ವಿಶೇಷವಾಗಿದೆ. ತೋಟದಾದ್ಯಂತ ಗೆಣಸು ಬೆಳೆಸಿದ್ದು, ಅದರ ಬಳ್ಳಿಗಳು ನೆಲವನ್ನೆಲ್ಲ ಆವರಿಸಿರುವುದರಿಂದ ಕಳೆ ಬೆಳೆಯುವುದಿಲ್ಲ. ಗೆಣಸನ್ನು ಕೀಳದೆ ಭೂಮಿಯಲ್ಲೇ ಬಿಡುವುದರಿಂದ ಅದು ಎರೆಹುಳುಗಳಿಗೆ ಆಹಾರವಾಗಿದ್ದು, ಸ್ವಾಭಾವಿಕ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಕಳೆ ತೆಗೆಯುವ ಹಾಗೂ ಉಳುಮೆ ವೆಚ್ಚವೂ ಕಡಿಮೆಯಾಗಿದೆ. ಇದರೊಂದಿಗೆ ಮಿಶ್ರ ಬೆಳೆಯಾಗಿ ಅರಿಶಿನ ಬೆಳೆದಿದ್ದು ಉತ್ತಮ ಇಳುವರಿ ಬಂದಿದೆ. ಬಾಳೆ ಬೆಳೆಗೆ ನೀಡುವ ಹನಿ ನೀರಾವರಿಯಿಂದ ತೆಂಗಿನ ಮರಗಳೂ ಸಮೃದ್ಧವಾಗಿ ಫಲ ನೀಡುತ್ತಿವೆ. “ಸಾವಯವ ಕೃಷಿ ಮಾಡುತ್ತಿರುವುದರಿಂದ ನಮ್ಮ ಬೆಳೆಗೆ ಬೇಡಿಕೆ ಕಡಿಮೆಯಾಗಿಲ್ಲ, ಬೆಲೆ ಸಿಗದೆ ತೊಂದರೆ ಅನುಭವಿಸಿದ ಪರಿಸ್ಥಿತಿ ಬಂದಿಲ್ಲ” ಎಂದು ಕೃಷ್ಣ ನಾಯಕ್ ಹೇಳುತ್ತಾರೆ.ವಿದ್ಯುತ್ ಅವಲಂಬನೆ ಕಡಿಮೆ ಮಾಡಲು ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡಿರುವ ಅವರು, ಕೊಳವೆಬಾವಿಯಿಂದ ನೀರು ಹರಿಸಲು ಸಹ ಸೌರಶಕ್ತಿಯನ್ನೇ ಬಳಸುತ್ತಿದ್ದಾರೆ. ಜೊತೆಗೆ ರೇಷ್ಮೆ ಕೃಷಿಯಲ್ಲೂ ತೊಡಗಿಸಿಕೊಂಡಿದ್ದು, ರಾಮನಗರ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ಎರಡೂ ಮಂಡಿಗಳ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಆರೋಗ್ಯ ಸುಧಾರಿಸಿದ್ದು, ಇದೀಗ ಕೃಷಿ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. “ನನ್ನ ಇಬ್ಬರು ಮಕ್ಕಳು; ಒಬ್ಬ ಎಂಜಿನಿಯರ್, ಮತ್ತೊಬ್ಬ ಲಾಯರ್. ಮನೆಗೆ ಬಂದಾಗ ಅವರು ಸಹ ಕೃಷಿಯಲ್ಲಿ ಕೈಜೋಡಿಸುತ್ತಾರೆ. ನಮ್ಮ ಕುಟುಂಬದ ಆತ್ಮಸ್ಥೈರ್ಯವೇ ನನ್ನ ಪತ್ನಿ ಎಂದು ಅವರು ನಗುತ್ತಾ ಹೇಳುತ್ತಾರೆ. ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಮೆಲುಕು ಹಾಕುವ ಕೃಷ್ಣ ನಾಯಕ್, “ದೇಶ ಸೇವೆಯ ಬಳಿಕ ಭೂಮಿ ತಾಯಿಯ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಅದರಲ್ಲಿ ಸಂತೋಷವೂ, ಕುಟುಂಬಕ್ಕೆ ನೆಮ್ಮದಿಯೂ ಸಿಕ್ಕಿದೆ” ಎಂದು ಮನದಾಳದ ಮಾತು ಹಂಚಿಕೊಂಡರು.ಮಾಜಿ ಯೋಧನಾಗಿ ಹಾಗೂ ಪ್ರಗತಿಪರ ರೈತನಾಗಿ ಸಾಧನೆ ಮಾಡುತ್ತಿರುವ ಕೃಷ್ಣ ನಾಯಕ್ ಅವರ ಕಾರ್ಯವನ್ನು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ಗುರುತಿಸಿ ಪ್ರೋತ್ಸಾಹಿಸಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ