ಪಟ್ಟಣದ ಅಭಿವೃದ್ಧಿ ಪೂರಕ ಯೋಜನೆ ರೂಪಿಸಿ

KannadaprabhaNewsNetwork | Published : Oct 5, 2024 1:37 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಚರಂಡಿ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ಮಾರ್ಟ್‌ಸಿಟಿ ಕನಸಿನ ಯೋಜನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌.ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಚರಂಡಿ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ಮಾರ್ಟ್‌ಸಿಟಿ ಕನಸಿನ ಯೋಜನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌.ನಾಡಗೌಡ ಹೇಳಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಪುರಸಭೆಯ ಸಾಮಾನ್ಯ ಸಭೆ ಹಾಗೂ ಸರ್ಕಾರಿ ತಾಲೂಕು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ವಸತಿ ಮನೆ ಇಲ್ಲದ ನಿಜವಾದ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳ ಲಾಭ ಸಿಗಬೇಕು ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ, ನಗರೋತ್ಥಾನ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಸದಸ್ಯರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ರಸ್ತೆಗಳು ನಿರ್ಮಾಣವಾಗಿವೆ. ಬಹುತೇಕ ಸಿಸಿ ರಸ್ತೆಗಳನ್ನು ಗುತ್ತಿಗೆದಾರರು ಅವೈಜ್ಞಾನಿಕ ಹಾಗೂ ಕಳಪೆಯಾಗಿ ನಿರ್ಮಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರ ಹಾಗೂ ಹಲವು ಸದಸ್ಯರು ಆರೋಪಿಸಿದ್ದಾರೆ. ಸರ್ಕಾರಿ ಎಸ್ಟಿಮೇಟ್‌ ಪ್ರಕಾರ ರಸ್ತೆಗಳ ಕಾಮಗಾರಿ ನಡೆಸಲಿ. ಇಲ್ಲದಿದ್ದರೆ ಬಿಟ್ಟು ಹೋಗಲಿ ಎಂದು ಎಚ್ಚರಿಸಿದರು. ಅಲ್ಲದೇ, ಕೆಲವರು ನಾಡಗೌಡರು ರಸ್ತೆ ಕಾಮಗಾರಿ ನಡೆಸದಂತೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸುಖಾಸುಮ್ಮನೆ ಆರೋಪಿಸಿದ್ದು, ಇದೆಲ್ಲ ಸರಿಯಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಪುರಸಭೆ ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳ ಹಾಗೂ ಸದಸ್ಯರಾದ ಹಣಮಂತ ಭೋವಿ, ವಿರೇಶ ಹಡಲಗೇರಿ ಮಾತನಾಡಿ, ಬೇರೆ ಬೇರೆ ಊರುಗಳಿಂದ ಬಂದು ಪಟ್ಟಣದಲ್ಲಿ ನೆಲೆಸಿರುವ ಸ್ಥಳೀಯರಲ್ಲದವರಿಗೆ ಆಶ್ರಯ ಕಮಿಟಿಗೆ ತಿಳಿಸದೆಯೇ ವಿಜಯಪುರ ಸ್ಲಂ ಬೋರ್ಡ್‌ ಅಧಿಕಾರಿಗಳು ಮನೆ ಹಂಚಿಕೆ ಮಾಡಿದ್ದಾರೆ. ಇದರಿಂದ ನಿಜವಾದ ಬಡ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಶಾಸಕ ನಾಡಗೌಡರು ಮಧ್ಯೆ ಪ್ರವೇಶಿಸಿ ಯಾಕೆ ಹೀಗೆ ಮಾಡಿದ್ದೀರಿ ಎಂದು ಸ್ಲಂ ಬೋರ್ಡ್‌ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ನಿಮ್ಮ ಮೇಲೆ ಈಗಾಗಲೇ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಈಗಾಗಲೇ ನೀಡಿರುವ ಅನಧಿಕೃತ ಹಕ್ಕು ಪತ್ರಗಳನ್ನು ಈ ಕೂಡಲೇ ರದ್ದು ಪಡಿಸಿ, ನೈಜ ಫಲಾನುಭವಿಗಳಿಗೆ ನೀಡಿ ಎಂದು ಸೂಚಿಸಿದರು.

ಅಲ್ಲದೇ, ಆಶ್ರಯ ಮನೆಗಳು ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ತಿಳಿಯಲು ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದ ಐದು ಜನರ ವಿಶೇಷ ತನಿಖೆ ಹಾಗೂ ಸಲಹ ತಂಡ ರಚಿಸಿ ಪರಿಶೀಲಿಸಿ ವರದಿ ತಯಾರಿಸಿ. ಅನಧಿಕೃತ ಹಕ್ಕುಪತ್ರಗಳನ್ನು ಕೂಡಲೇ ರದ್ದು ಮಾಡಿ ಅರ್ಹರಿಗೆ ಹಂಚಿಕೆ ಮಾಡುವಂತೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹಾಗೂ ವಿಜಯಪುರ ಸ್ಲಂ ಬೋರ್ಡ್‌ನ ಸಹಾಯಕ ಎಂಜಿನಿಯರ್‌ ಪ್ರಹ್ಲಾದ ಪಾಟೀಲಗೆ ಸೂಚಿಸಿದರು.

ಇನ್ನು, ವಾಣಿಜ್ಯ ತೆರಿಗೆ ಭರಿಸುವವರ ಬಗ್ಗೆ ಒಂದು ದಿನವೂ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡದೆ ಪುರಸಭೆ ವ್ಯಾಪ್ತಿಯಲ್ಲಿನ ಗೂಡಂಗಡಿಗಳನ್ನು ದಿಢೀರ್‌ ತೆರವು ಮಾಡಿದ್ದೀರಿ. ಆದರೆ, ಪುರಸಭೆ ಕಚೇರಿ ಪಕ್ಕದಲ್ಲಿ ಕಚೇರಿ ಜಾಗ ಕಬಳಿಸಿ ಕಟ್ಟಿದ ಕಟ್ಟಡವನ್ನು ಯಾಕೆ ತೆರವುಗೊಳಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಅದಕ್ಕೆ, ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ನಾವು ಯಾರ ಬಗ್ಗೆಯೂ ಬೇಧಭಾವ ಮಾಡಿಲ್ಲ. ನಮ್ಮ ವ್ಯಾಪ್ತಿಗೆ ಬಂದಿರುವ ಎಲ್ಲವನ್ನು ಉಳಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶವಿದೆ. ಅದರಂತೆ ಈ ಕಟ್ಟಡದ ಬಗ್ಗೆಯೂ ಸಿಟಿ ಸರ್ವೇ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳಲಾಗಿದೆ. ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಮಾತನಾಡಿ, ಜನರು ಓಟುಕೊಟ್ಟು ಪಟ್ಟಣದ ಅಭಿವೃದ್ಧಿಗೆ ನಮ್ಮನ್ನು ಗೆಲ್ಲಿಸಿ ಕಳಿಸಿದ್ದಾರೆ. ನಾವೇಲ್ಲ ಒಗ್ಗಟ್ಟಾಗಿ ಬೇಧಭಾವವಿಲ್ಲದೇ ಪಕ್ಷಾತೀತವಾಗಿ ಪಟ್ಟಣದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮೂಲಕ ಶಾಸಕ ನಾಡಗೌಡರ ಘನತೆ ಎತ್ತಿಹಿಡಿಯೋಣ ಎಂದು ಹೇಳಿದರು.

ಒಟ್ಟು ₹ 27 ಕೋಟಿ ವೆಚ್ಚದಲ್ಲಿ 15ನೇ ಹಣಕಾಸು ಯೋಜನೆಯಡಿ ಸರ್ಕಾರದಿಂದ ಬಿಡುಗಡೆಗೊಂಡ ವಿಶೇಷ ಅನುದಾನದಲ್ಲಿ ಪಟ್ಟಣದ ಕೆರೆ ಅಭಿವೃದ್ಧಿ, ವಿವಿಧ ಕಡೆಗಳಲ್ಲಿ ಬಸ್ ನಿಲ್ದಾಣ, ರಸ್ತೆಗಳ ಅಗಲಿಕರಣ, ಸಂತೆ ಬಜಾರ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಒಳಚರಂಡಿ ನಿರ್ವಹಣೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಿ ಸರ್ವಸದಸ್ಯರ ಠರಾವು ಪಾಸ್‌ ಮಾಡಲಾಯಿತು.

ಈ ವೇಳೆ ಪುರಸಭೆ ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರಾದ ರೀಯಾಜಹಮ್ಮದ ಢವಳಗಿ, ಚನ್ನಪ್ಪ ಕಂಠಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಭಾರತಿ ಪಾಟೀಲ, ಶಾಹಾಜದಬಿ ಹುಣಸಗಿ, ರಫೀಕ ದ್ರಾಕ್ಷೀ, ಬಸವರಾಜ ಮುರಾಳ, ಸೇರಿದಂತೆ ಅನೇಕ ಇದ್ದರು.

4ಎಂಬಿಎಲ್1 ಮುದ್ದೇಬಿಹಾಳ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ತಾಲೂಕಾ ವಿವಿಧ ಸರಕಾರಿ ಅಧಿಕಾರಿಗಳ ಹಾಗೂ ಪುರಸಭೆ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಬಾಗವಹಿಸಿ ಅವರು ಮಾತನಾಡಿದರು.

ಬಾಕ್ಸ್‌

ಸಭೆಯಲ್ಲಿ ಕನ್ನಡಪ್ರಭ ವರದಿ ಬಗ್ಗೆ ಪ್ರಸ್ತಾಪ

ರಸ್ತೆ ಕಾಮಗಾರಿ ನಡೆಸಿ ಒಂದೂವರೇ ವರ್ಷವೂ ಕಳೆದಿಲ್ಲ. ರಸ್ತೆಗಳು ಬಿರುಕು ಬಿಟ್ಟು ಹಾಳಾಗಿ ಹೋಗಿವೆ ಎಂಬುದರ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸಭೆಯಲ್ಲಿ ಶಾಸಕರು ಚರ್ಚೆ ನಡೆಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂತಹ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಹಿಂದಿನ ಸಭೆಯಲ್ಲಿಯೇ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದ್ದೆ. ಆದರೆ, ಇಲ್ಲಿಯತನಕವೂ ಗುತ್ತಿಗೆದಾರನ ಮೇಲೆ ಯಾವುದೇ ಕ್ರಮವಾಗಿಲ್ಲ. ಶೀಘ್ರ ಠರಾವು ಪಾಸ್‌ ಮಾಡಿ ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಿಕೊಡಿ. ಕಾಮಗಾರಿ ಬಗ್ಗೆ ನಾನೇ ಮುಂದೆ ನಿಂತು ತನಿಖೆ ಮಾಡಿಸುತ್ತೇನೆ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.

Share this article