ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳನ್ನು ರೂಪಿಸುವಾಗ ಯೋಜನೆಯ ಅಗತ್ಯತೆ, ಈ ಕುರಿತ ನಿಯಮಾವಳಿಗಳು ಮತ್ತು ಸಂಬಂಧಪಟ್ಟ ಅಗತ್ಯ ಅನುಮೋದಿತ ದಾಖಲೆಗಳೊಂದಿಗೆ ಸಮರ್ಪಕವಾದ ಕ್ರಿಯಾ ಯೋಜನೆ ರೂಪಿಸಿ ಮಂಜೂರಾತಿಗೆ ಸಲ್ಲಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ನಿರ್ದೇಶನ ನೀಡಿದರು.
ಶನಿವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಮರ್ಪವಾಗಿ ನಿರ್ವಹಿಸಲು ಅನುಕೂಲವಾಗುವಂತೆ ₹2 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು, ಈ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 118 ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಈ ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವಾಗ ಕಾಮಗಾರಿಗಳ ಅಗತ್ಯತೆ ಮತ್ತು ಇವುಗಳನ್ನು ಕೈಗೊಳ್ಳಲು ಅನುಸರಿಸಬೇಕಾದ ನಿಯಮಾವಳಿಗಳು ಮತ್ತು ಸಂಬಂಧಪಟ್ಟ ಅಗತ್ಯ ಅನುಮೋದಿತ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಒಂದು ವಾರದಲ್ಲಿ ಎಲ್ಲಾ ದಾಖಲೆ ಒಳಗೊಂಡ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ, ಪುನಃ ಅನುಮೋದನೆಗೆ ಸಲ್ಲಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚಿಸಿದರು.
ಜಲ ಜೀವನ್ ಮಿಷನ್ ಕಾಮಗಾರಿಗಳನ್ನು 4 ಹಂತದಲ್ಲಿ ಕೈಗೊಂಡಿದ್ದು ಒಟ್ಟು 965 ಕಾಮಗಾರಿಗಳ ಪೈಕಿ 956 ಕಾಮಗಾರಿಗಳು ಆರಂಭಗೊಂಡಿದ್ದು, 718 ಕಾಮಗಾರಿ ಪೂರ್ಣಗೊಳಿಸಿ, 657 ಕಾಮಗಾರಿಗಳನ್ನು ಸಂಬಂಧಪಟ್ಟ ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಸಂಪೂರ್ಣಗೊಂಡಿರುವ ಕಾಮಗಾರಿಗಳ ಕುರಿತ ವಿವರಗಳನ್ನು ಒಳಗೊಂಡ ಸಾರ್ವಜನಿಕ ಮಾಹಿತಿ ಫಲಕಗಳನ್ನು ಸಂಬಂಧಪಟ್ಟ ಗ್ರಾಮಗಳಲ್ಲಿ ಅಳವಡಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಜಲಮೂಲದ ಸ್ಥಳ ಬದಲಾವಣೆ, ಹೆಚ್ಚಿನ ಮನೆಗಳಿಗೆ ಸಂಪರ್ಕ ನೀಡಬೇಕಾದ ಸಂದರ್ಭದಲ್ಲಿ ಕಾಮಗಾರಿಗಳ ಪರಿಮಾಣಗಳಲ್ಲಿ ಉಂಟಾಗುವ ವ್ಯತ್ಯಾಸಗಳ ಕುರಿತ ವೇರಿಯೇಷನ್ ಪ್ರಸ್ತಾವನೆಗಳು ಮತ್ತು ವಿವಿಧ ಕಾರಣಗಳಿಂದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ಇರುವ ಕುರಿತು ಅವಧಿ ವಿಸ್ತರಣಾ ಪ್ರಸ್ತಾವನೆಗಳನ್ನು ಸೂಕ್ತ ಕಾರಣಗಳು, ತಾಂತ್ರಿಕ ದಾಖಲೆಗಳು ಹಾಗೂ ಪೂರಕವಾದ ಇತರೇ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಅನುಮೋದನೆಗೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸಿದ್ದಾಪುರ ತಾಲೂಕಿನ ಹಳಗೇರಿ ಗ್ರಾಪಂನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಮಲ ತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿಗೆ ಸಂಬಂಧಿಸಿದ ಗ್ರಾಪಂನಿಂದ ಆಕ್ಷೇಪ ವ್ಯಕ್ತವಾಗಿರುವ ಕುರಿತಂತೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಕಾಮಗಾರಿಯ ಕುರಿತ ಈವರೆಗಿನ ಪ್ರಗತಿಯ ಸಂಪೂರ್ಣ ವಿವರ ಸಲ್ಲಿಸುವಂತೆ ಸಿಇಒ ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಧಾರವಾಡ ವಿಭಾಗದ ಮುಖ್ಯ ಎಂಜಿನಿಯರ್ ರೇಣುಕಾರಾಧ್ಯ ಸೊಪ್ಪಿನಮಠ, ಜಿಪಂ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಮುಖ್ಯ ಲೆಕ್ಕಾಧಿಕಾರಿ ಆನಂದ್ ಹಬೀಬ್ ಇದ್ದರು.