ಕರಾವಳಿಗೆ ಪ್ರತ್ಯೇಕ ನಿಯಮ ರೂಪಿಸಿ: ಗಂಟಿಹೊಳೆ

KannadaprabhaNewsNetwork |  
Published : Aug 15, 2026, 03:45 AM IST
ವಿಬಿ-ಜಿ ರಾಮ್ ಜಿ ಯೋಜನೆ | Kannada Prabha

ಸಾರಾಂಶ

ಕರಾವಳಿ ಜಿಲ್ಲೆಗಳ ಭೌಗೋಳಿಕ ಹಾಗೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿಬಿ-ಜಿ ರಾಮ್ ಜಿ ಯೋಜನೆ ನಿಯಮಗಳಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು.

ಕುಂದಾಪುರ: ಕರಾವಳಿ ಜಿಲ್ಲೆಗಳ ಭೌಗೋಳಿಕ ಹಾಗೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿಬಿ-ಜಿ ರಾಮ್ ಜಿ ಯೋಜನೆ ನಿಯಮಗಳಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು. ರಾಜ್ಯದ ಇತರ ಭಾಗಗಳ ನಿಯಮಗಳನ್ನು ಕರಾವಳಿಗೂ ಅನ್ವಯಿಸುವುದರಿಂದ ಹಲವು ಪ್ರಾಯೋಗಿಕ ಹಾಗೂ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಅಧಿಕಾರಿಗಳು ಸಮಸ್ಯೆಗಳನ್ನು ತಕ್ಷಣ ಗುರುತಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬುಧವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ನಡೆದ ಬೈಂದೂರು ವಿಧಾನಸಭೆ ಕ್ಷೇತ್ರದ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆಯಲ್ಲಿ ನಿಯಮ ಬಿಗಿಗೊಳಿಸಿರುವುದು ಸೋರಿಕೆ ಹಾಗೂ ದುರುಪಯೋಗ ತಡೆಯಲು ಹೊರತು ಕಾಮಗಾರಿ ನಿಲ್ಲಿಸಲು ಅಲ್ಲ. ನರೇಗಾದಲ್ಲಿದ್ದ ಇಂತಹ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ ನಿಯಮ ಬದಲಾಯಿಸಲಾಗಿತ್ತು. ಅದೇ ರೀತಿ ವಿಬಿ-ಜಿ ರಾಮ್ ಜಿ ಯೋಜನೆಯ ಸಮಸ್ಯೆಗಳನ್ನೂ ಕ್ರೋಡೀಕರಿಸಿ ವರದಿ ಸಲ್ಲಿಸಬೇಕು. ಪಿಡಿಒಗಳ ಮೇಲೆ ಅನಗತ್ಯ ಒತ್ತಡ ಹೇರಲು ಅವಕಾಶ ನೀಡುವುದಿಲ್ಲ ಎಂದರು.

ಈ ವರ್ಷ ಕ್ರಿಯಾ ಯೋಜನೆ ಮಂಜೂರಾತಿ ತಡವಾಗಿದ್ದು, ಅಂದಾಜು ಪಟ್ಟಿ ತಯಾರಿ ನಡೆಯುತ್ತಿದೆ. ನರೇಗಾದಲ್ಲಿ 266 ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯಡಿ 318 ಕಾಮಗಾರಿಗಳನ್ನು ಗುರುತಿಸಲಾಗಿದೆ. ಕೈಬಿಟ್ಟ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದವುಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬೈಂದೂರು ತಾಪಂ ಸಹಾಯಕ ನಿರ್ದೇಶಕ ಸುರೇಶ್ ತಿಳಿಸಿದರು.

ಎನ್‌ಎನ್‌ಎಂಎಸ್ ಆ್ಯಪ್, ಇಂಗು ಗುಂಡಿ ಅನುದಾನ ಕಡಿತ, ತಾಂತ್ರಿಕ ಮಂಜೂರಾತಿ, ಕೆ2 ಮೂಲಕ ಪಾವತಿ ಹಾಗೂ ಇಲಾಖಾವಾರು ಲಾಗಿನ್ ವ್ಯವಸ್ಥೆಯ ಕೊರತೆಯಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಗಮನ ಸೆಳೆದರು. ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಜಿಪಂ ಸಹಾಯಕ ನಿರ್ದೇಶಕ ವಿಜಯ ಶ್ಯಾಮ್ ಹೇಳಿದರು.

ಕುಂದಾಪುರ ತಾಪಂ ಇಒ ಮಹೇಶ್ ಕೆ.ಜಿ., ಬೈಂದೂರು ತಾಪಂ ಇಒ ನಾಗಶಯನ, ನರೇಗಾ ಸಹಾಯಕ ನಿರ್ದೇಶಕ ರಾಜೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.ಕೂಲಿ ಕಾರ್ಮಿಕರ ವಲಸೆ ತಡೆಯಲು ಒತ್ತು: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಸ್ಥಳೀಯವಾಗಿಯೇ ಕೆಲಸ ಒದಗಿಸುವ ಉದ್ದೇಶದಿಂದ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಗ್ರಾಪಂಗಳ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿರುವುದರಿಂದ ಹಾಗೂ ಸಂಬಂಧಪಟ್ಟ ಇಲಾಖೆಗಳ ಲಾಗಿನ್ ಸಮಸ್ಯೆಯಿಂದಾಗಿ ಕೆಲವು ಇಲಾಖೆಗಳು ಅಂದಾಜು ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ನಾಗೇಂದ್ರ ರಾಜೀನಾಮೆಗೆ ಉಡುಪಿ ಬಿಜೆಪಿ ಆಗ್ರಹ
ಕಲ್ಮಾಡಿ ಚರ್ಚ್‌ನ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ