ಮಲ್ಪೆಯ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ಚರ್ಚ್‌ ನ ವೆಲಂಕಣಿ ಆರೋಗ್ಯ ಮಾತೆಯ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಗುರುವಾರ ಆದಿ ಉಡುಪಿಯಿಂದ ಚರ್ಚ್‌ವರೆಗೆ ಅದ್ದೂರಿಯಾಗಿ ನಡೆಯಿತು.

ಉಡುಪಿ: ಮಲ್ಪೆಯ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ಚರ್ಚ್‌ ನ ವೆಲಂಕಣಿ ಆರೋಗ್ಯ ಮಾತೆಯ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಗುರುವಾರ ಆದಿ ಉಡುಪಿಯಿಂದ ಚರ್ಚ್‌ವರೆಗೆ ಅದ್ದೂರಿಯಾಗಿ ನಡೆಯಿತು. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂ.ಫ್ರಾಂಕ್ಲಿನ್ ಡಿಸೋಜ ವೆಲಂಕಣಿ ಮಾತೆಯ ಮೂರ್ತಿಯನ್ನು ಆಶೀರ್ವದಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ವಾರ್ಷಿಕ ಹಬ್ಬಗಳ ಸಂದರ್ಭದಲ್ಲಿ ಚರ್ಚ್ ಗಳ ಪಾಲಕರ ಮಂಜೂಶಾ (ಮೂರ್ತಿ)ಗಳನ್ನು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಗೌರವ ಸೂಚಿಸುವುದು ಕ್ರೈಸ್ತ ಸಂಪ್ರದಾಯದ ಒಂದು ಭಾಗವಾಗಿದೆ. ವೆಲಂಕಣಿ ಮಾತೆ ಪವಾಡದ ಮಾತೆ ಎಂದು ಜನಜನಿತವಾಗಿದ್ದು, ಆಕೆ ಮೂಲಕ ಯೇಸು ಕ್ರಿಸ್ತರ ಕೃಪಾಶೀರ್ವಾದ ಪ್ರತಿಯೊಬ್ಬರ ಮೇಲೆ ಹರಿದು ಬರಲಿ ಎಂದು ವಂ. ಫ್ರಾಂಕ್ಲಿನ್ ಡಿಸೋಜಾ ಆಶೀರ್ವಚನ ನೀಡಿದರು. ಮೆರವಣಿಗೆಯು ಆದಿ ಉಡುಪಿ ಮಾರ್ಗವಾಗಿ ಆರಂಭಗೊಂಡು ಚರ್ಚಿನ ತನಕ ಕಾಲ್ನಡಿಗೆಯ ಮೂಲಕ ನಡೆಯಿತು. ತದ ನಂತರ ನಡೆದ ಬಲಿಪೂಜೆಯನ್ನು ವಂ.ಫ್ರಾಂಕ್ಲಿನ್ ಡಿಸೋಜ ನೆರವೇರಿಸಿ ಸಂದೇಶ ನೀಡಿದರು. ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಆ.15ರಂದು ನಡೆಯಲಿದ್ದು, ಬೆಳಗ್ಗೆ 10.30 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹಬ್ಬದ ಬಲಿಪೂಜೆ ನೆರೆವೇರಿಸಲಿರುವರು. ಪುಣ್ಯಕ್ಷೇತ್ರದ ರೆಕ್ಟರ್ ವಂ. ಬ್ಯಾಪ್ಟಿಸ್ಟ್ ಮಿನೇಜಸ್, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಫರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವ, ಆಯೋಗಗಳ ಸಂಯೋಜಕ ಡೆನಿಸ್ ಲಸ್ರಾದೊ ಹಾಗೂ ಚರ್ಚಿನ ಮಹೋತ್ಸವ ಆಚರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.