ಕಲ್ಯಾಣ ನಾಡಲ್ಲಿ 43 ಮೆಗಾ ವ್ಯಾಟ್‌ ಸೌರ ವಿದ್ಯುತ್ ಉತ್ಪಾದನೆ: ಇಂಧನ ಸಚಿವ ಕೆ.ಜೆ.ಜಾರ್ಜ್

KannadaprabhaNewsNetwork |  
Published : Jan 25, 2025, 01:02 AM ISTUpdated : Jan 25, 2025, 03:00 PM IST
ಫೋಟೋ- ಜೆಸ್ಕಾಂ 1, ಜಸ್ಕಾಂ 2 ಮತ್ತು ಜೆಸ್ಕಾಂ 3 | Kannada Prabha

ಸಾರಾಂಶ

ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 10 ವಿದ್ಯುತ್ ಉಪ ವಿತರಣಾ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಕುಸುಮ್- ಸಿ ಯೋಜನೆಯಡಿ ಫೀಡರ್ ಸೋಲರೈಸೇಷನ್ ಮೂಲಕ 43 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

  ಕಲಬುರಗಿ : ರೈತರ ಕೃಷ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 10 ವಿದ್ಯುತ್ ಉಪ ವಿತರಣಾ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಕುಸುಮ್- ಸಿ ಯೋಜನೆಯಡಿ ಫೀಡರ್ ಸೋಲರೈಸೇಷನ್ ಮೂಲಕ 43 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಇಂಧನ ಇಲಾಖೆಗೆ ಸಂಬಂಧಿಸಿದಂತೆ ಇಲ್ಲಿನ ಜೆಸ್ಕಾಂ ಕೇಂದ್ರ ಕಾರ್ಯಾಲಯದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಲಬುರಗಿ ಜಿಲ್ಲೆಯ ಹಡಗಿಲ್ ಹಾರುತಿ, ವಿ.ಕೆ.ಸಲಗರ್ ಹಾಗೂ ಗೊಬ್ಬೂರ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಫೀಡರ್ ಸೋಲರೈಸೇಷನ್ ಮಾಡಲಾಗುತ್ತಿದೆ. ಖಾಸಗಿ ಕಂಪನಿಗಳೇ ಸೋಲಾರ್ ಘಟಕ ಸ್ಥಾಪಿಸಿ ವಿದ್ಯುತ್ ಪೂರೈಸಲಿದ್ದು, ಸರ್ಕಾರದಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 2.95 ರು. ನಿಂದ ಗರಿಷ್ಠ 3.17 ರು.ವರೆಗೆ ಖಾಸಗಿಯವರಿಗೆ ಪಾತಿಸಲಾಗುವುದು. ಈ ವಿದ್ಯುತ್ತನ್ನು ಪಕ್ಕದ ಫೀಡರ್‌ಗೆ ರವಾನಿಸಿ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ 4,456 ರೈತರ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುತ್ತದೆ ಎಂದು ವಿವರಿಸಿದರು.

ಕುಸುಮ್-ಸಿ ಅಡಿ ಸಾವಿರ ಮೆ.ವ್ಯಾ. ವಿದ್ಯುತ್:

ರಾಜ್ಯಾದ್ಯಂತ ಕುಸುಮ್- ಸಿ ಯೋಜನೆಯಡಿ ಎರಡು ಹಂತಗಳಲ್ಲಿ 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದ್ದು, 1 ಮೆಗಾ ವ್ಯಾಟ್ ಘಟಕಕ್ಕೆ 4 ಎಕರೆ ಜಮೀನು ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರಿ ಜಮೀನು ಉಚಿತವಾಗಿ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಲೀಸ್ ಪಡೆದು ಯೋಜನೆ ಆರಂಭಿಸಲಾಗುತ್ತಿದೆ ಎಂದರು.

ವಿದ್ಯುತ್ ಆಘಾತಕ್ಕೆ ಒಳಗಾದವರಿಗೆ ಗರಿಷ್ಠ ಪರಿಹಾರ:

ಕಲಬುರಗಿ ಮೋಹನ್ ಲಾಡ್ಜ್ ಬಳಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಎರಡು ಕಾಲು ಕಳೆದುಕೊಂಡು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಗೆ ಜೆಸ್ಕಾಂ 1 ಲಕ್ಷ ರು. ಪರಿಹಾರ ನೀಡಿದೆ. ಆಸ್ಪತ್ರೆ ವೆಚ್ಚವನ್ನು ಜೆಸ್ಕಾಂನಿಂದ ಭರಿಸುವುದರ ಜತೆಗೆ ಕುಟುಂಬಕ್ಕೆ ಎಲ್ಲಾ ರೀತಿಯ ಪರಿಹಾರ ಒದಗಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಮನವಿ ಮಾಡಿದಾಗ ಸ್ಪಂದಿಸಿದ ಸಚಿವ ಕೆ.ಜೆ.ಜಾರ್ಜ್, ಜೆಸ್ಕಾಂನಿಂದ ಗರಿಷ್ಠ ಪರಿಹಾರ ಒದಗಿಸುವ ಭರವಸೆ ನೀಡಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ, ಮುಖ್ಯ ಇಂಜಿನಿಯರ್ (ಕಾರ್ಯಾಚರಣೆ) ಆರ್.ವೆಂಕಟೇಶ ಪ್ರಸಾದ್, ಕಲಬುರಗಿ ವಲಯದ ಮುಖ್ಯ ಎಂಜಿನಿಯರ್ ವೆಂಕಟೇಶ ಹಾಲ್ವಿ, ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಕಲಬುರಗಿ ಮತ್ತು ಯಾದಗಿರಿ ಅಧೀಕ್ಷಕ ಅಭಿಯಂತರ ಖಂಡೆಪ್ಪ ಸೋನಾವಣೆ, ಕೆಪಿಟಿಸಿಎಲ್ ಅಧಿಕಾರಿಗಳು, ಇತರರು ಪಾಲ್ಗೊಂಡಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್