ಅನುವಾದದಲ್ಲಿ ಹೊಸದೊಂದು ಹಾದಿ ಕಂಡುಕೊಂಡವರು ದೀಪಾ ಭಾಸ್ತಿ: ಜ.ನಾ.ತೇಜಶ್ರೀ

KannadaprabhaNewsNetwork |  
Published : Jun 10, 2025, 05:02 AM IST
ಚಿತ್ರ : 9ಎಂಡಿಕೆ4 : ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ನಗರದ ರೆಡ್‌ ಬ್ರಿಕ್ಸ್‌ ಸಭಾಂಗಣದಲ್ಲಿ ಬೂಕರ್‌ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅವರ ಅಭಿನಂದನಾ ಸಮಾರಂಭ ನಡೆಯಿತು.

ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲೂಕು ಘಟಕ ಮತ್ತು ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅವರ ಅಭಿನಂದನಾ ಸಮಾರಂಭ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ ಹಾಸನದ ಅನುವಾದಕಿ ಹಾಗೂ ಲೇಖಕಿ ಜ.ನಾ.ತೇಜಶ್ರೀ ಮಾತನಾಡಿ, ಅನುವಾದ ಕ್ಷೇತ್ರದಲ್ಲಿ ಹೊಸದೊಂದು ಹಾದಿ ಕಂಡುಕೊಂಡವರು ದೀಪಾ ಭಾಸ್ತಿ. ಅವರದ್ದು ಒಂದು ಬಗೆಯ ಸೃಜನಶೀಲ ಆಲೋಚನಾ ಕ್ರಮ. ನಿಜವಾದ ಬಂಡಾಯ ಎಂದೂ ನಾವು ಹೇಳಬಹುದು. ಮುಖ್ಯವಾಗಿ ಅವರು ಬಳಸಿದ್ದು ಕನ್ನಡೀಕೃತ ಇಂಗ್ಲೀಷ್‌. ಹಾಗಾಗಿ, ಕನ್ನಡದ ರುಚಿ ಇಂಗ್ಲಿಷ್‌ ಓದುಗರಿಗೆ ದೊರಕಿತು ಎಂದು ಹೇಳಿದರು.

ಈಗ ಬಂದಿರುವ ಪ್ರಶಸ್ತಿಯಿಂದ ಅನುವಾದಕರ ಘನತೆ ಹೆಚ್ಚುತ್ತದೆ. ಕನ್ನಡದಲ್ಲಿ ಅನುವಾದಕರಿಗೆ ಸಿಗುವ ಗೌರವ ಧನ ‘ಡಿಟಿಪಿ’ ಮಾಡಿದವರಿಗಿಂತ ಕಡಿಮೆ. ಕೃತಜ್ಞತೆಯೇ ಇಲ್ಲದ ಕೆಲಸ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಮಾತನಾಡಿ, ದೀಪಾ ಭಾಸ್ತಿ ಕೇವಲ ಅನುವಾದ ಮಾಡಿಲ್ಲ. ಅವರು ಒಂದು ರೀತಿಯಲ್ಲಿ ಮರುಸೃಷ್ಟಿಯನ್ನೆ ಮಾಡಿದ್ದಾರೆ ಎನ್ನಬಹುದು. ಒಂದು ವೇಳೆ ಇವರು ಅನುವಾದ ಮಾಡಿರದೇ ಹೋಗಿದ್ದರೆ ಬೂಕರ್‌ ಬರುತ್ತಲೇ ಇರಲಿಲ್ಲ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನುವಾದಕಿ ದೀಪಾ ಭಾಸ್ತಿ, ಈ ಅನುವಾದದಿಂದ ಕನ್ನಡದ ಮಹತ್ವ ಹೆಚ್ಚಿದೆ ಎನ್ನುವುದಕ್ಕಿಂತಲೂ ಕನ್ನಡದ ಅನೇಕ ಪದಗಳು ಇಂಗ್ಲಿಷ್‌ಗೆ ಹೋಗಿ ಆ ಭಾಷೆಗೆ ಹೆಚ್ಚು ಪ್ರಯೋಜನವಾಗಿದೆ ಎಂದು ಹೇಳಿದರು.

ಹಿಂದೆ ಇಂಗ್ಲಿಷ್‌ ಕಾಮಿಕ್ಸ್‌ನಲ್ಲಿ ಅಲ್ಲಿಯದ್ದೇ ಆದ ಪದಗಳಿಗೆ ಅಡಿಟಿಪ್ಪಣಿ ಇರುತ್ತಿರಲಿಲ್ಲ. ಈಗ ನಾನು ಸಹ ಕನ್ನಡ ಪದಗಳಿಗೆ ಅಡಿ ಟಿಪ್ಪಣಿ ನೀಡದೇ ಬಳಸಿದೆ. ಇದರಿಂದ ಒಂದು ರೀತಿಯಲ್ಲಿ ವಸಾಹತುಷಾಹಿ ಭಾಷೆಯಾದ ಇಂಗ್ಲಿಷ್‌ನ ಶ್ರೇಷ್ಠತೆಯನ್ನು ಮುರಿದಂತಾಯಿತು ಎಂದು ಹೇಳಿದರು.

ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ ದೀಪಾ ಭಾಸ್ತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಯತ್ನಿಸಬೇಕು ಹಾಗೂ ಜಿಲ್ಲಾಡಳಿತವೂ ಅವರನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವಕಾಮತ್ ಮಾತನಾಡಿ ಅನುವಾದ ಸುಲಭದ ಕೆಲಸ ಅಲ್ಲ. ಇಂತಹ ಕೆಲಸದಲ್ಲಿ ಯಶಸ್ಸು ಪಡೆದಿರುವ ದೀಪಾ ಭಾಸ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಬೆಳಗಲು ದಾರಿ ದೀಪ ಆಗಲಿ ಎಂದು ಶುಭ ಕೋರಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಮುಂಬರುವ ದಿನಗಳಲ್ಲಿ ದೀಪಾ ಭಾಸ್ತಿ ಮತ್ತು ಭಾನು ಮುಷ್ತಾಕ್ ಇಬ್ಬರನ್ನೂ ಒಟ್ಟಿಗೆ ಸೇರಿಸಿ ಸನ್ಮಾನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ಡಾ.ಕಾವೇರಿ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ