ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಭಿವೃದ್ಧಿಗೆ ಬುನಾದಿ: ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Jun 29, 2025, 01:32 AM IST
ಪೋಟೋ: 28ಎಸ್‌ಎಂಜಿಕೆಪಿ05 ಶಿವಮೊಗ್ಗದ ಶಿವಮೊಗ್ಗ ನಗರದ ಮಹಾನಗರ ಪಾಲಿಕೆಯ 35 ನೇ ವಾರ್ಡ್‌ನಲ್ಲಿ ಬರುವ ಸರ್ಕಾರಿ ಪ್ರೌಢ ಶಾಲೆ ಸುಳೇಬೈಲಿನಲ್ಲಿ ಕಾರ್ಪೋರೇಟ್ ಸಾಮಾಜಿಕ ನಿಧಿ ಹಾಗೂ ವಿವಿಧ ದಾನಿಗಳಿಂದ ಸಂಗ್ರಹವಾದ 23 ಲಕ್ಷ ರು.ಹಣದಲ್ಲಿ ಮೊದಲ ಅಂತಸ್ತಿನಲ್ಲಿ ನಿರ್ಮಿಸಲಾಗಿರುವ 3 ನೂತನ ಕೊಠಡಿಗಳನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಸಮಾಜದ ಅಭಿವೃದ್ಧಿಗೆ ಬುನಾದಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಸಮಾಜದ ಅಭಿವೃದ್ಧಿಗೆ ಬುನಾದಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಲೆನಾಡು ರೌಂಡ್ ಟೇಬಲ್-266 ಇವರ ವತಿಯಿಂದ ಶಿವಮೊಗ್ಗ ನಗರದ ಮಹಾನಗರ ಪಾಲಿಕೆಯ 35 ನೇ ವಾರ್ಡ್‌ನಲ್ಲಿ ಬರುವ ಸರ್ಕಾರಿ ಪ್ರೌಢ ಶಾಲೆ ಸುಳೇಬೈಲಿನಲ್ಲಿ ಕಾರ್ಪೋರೇಟ್ ಸಾಮಾಜಿಕ ನಿಧಿ ಹಾಗೂ ವಿವಿಧ ದಾನಿಗಳಿಂದ ಸಂಗ್ರಹವಾದ 23 ಲಕ್ಷ ರು. ಹಣದಲ್ಲಿ ಮೊದಲ ಅಂತಸ್ತಿನಲ್ಲಿ ನಿರ್ಮಿಸಲಾಗಿರುವ 3 ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.ಎಲ್ಲವನ್ನು ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ. ಇಂತಹ ಸಮಾಜ ಮುಖಿ ಕೆಲಸಗಳನ್ನು ದೇಶದಾದ್ಯಂತ ಸದ್ದಿಲ್ಲದೇ ರೋಟರಿ ಸಂಸ್ಥೆಗಳು, ರೌಂಡ್ ಟೇಬಲ್ ಸಂಸ್ಥೆಗಳು ವಿವಿಧ ಸಂಸ್ಥೆಗಳ ಸಿ.ಎಸ್.ಆರ್ ನಿಧಿ, ಕೊಡುಗೈ ದಾನಿಗಳಿಂದ ಸಂಗ್ರಹಿಸಿ, ಕ್ರೋಢಿಕರಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿವೆ ಎಂದು ಶ್ಲಾಘಿಸಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಮಾತನಾಡಿ, ಶಿವಮೊಗ್ಗ ಮಲೆನಾಡು ರೌಂಡ್ ಟೇಬಲ್-266 ಈ ಸಂಸ್ಥೆಯು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತಿದ್ದು, ಈ ಸಂಸ್ಥೆಯು ಬಹಳ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿಯವರು ಮಾತನಾಡಿ, ಮಕ್ಕಳು ಎಳೆ ವಯಸ್ಸಿನಲ್ಲಿಯೇ ಸಮಾಜದಲ್ಲಿ ಉತ್ತಮ ಸಂಸ್ಕಾರವನ್ನು ಕಲಿಯಬೇಕು. ಶಾಲೆಗಳಲ್ಲಿ ಮಕ್ಕಳಿಗೆ ದಿನಕ್ಕೊಂದು ಉತ್ತಮವಾದ ನೀತಿ ಕಥೆಯನ್ನು ಹೇಳಿಕೊಡಬೇಕು. ಮಕ್ಕಳು ದಿನಕ್ಕೊಂದು ಅವರು ಮಾಡಿದ ಒಳ್ಳೆಯ ಕೆಲಸವನ್ನು ಬರೆದುಕೊಂಡು ಬರುವಂತೆ ಹೇಳಬೇಕು. ಅದರ ಜೊತೆಗೆ ಓದುವುದು, ಬರೆಯುವುದು, ಓದಿದ್ದನ್ನು ಪುನರ್ ಮನನ ಮಾಡಲು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್ ಮಾತನಾಡಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020 ನ್ನು ಜಾರಿಗೆ ತಂದಿದ್ದು, ಅದನ್ನು ಕರ್ನಾಟದಲ್ಲಿ ಸರಿಯಾಗಿ ಅನುಷ್ಟಾನಕ್ಕೆ ತಂದಿಲ್ಲ. ಶಿಕ್ಷಣ ವ್ಯವಸ್ಥೆಯ ಬಗ್ಗೆ 5+3+3+4 ಫಾರ್ಮುಲಾವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಶಿಕ್ಷಣ ವ್ಯವಸ್ಥೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಿಯರ್ ಲೈಟ್ ಲೈನರ್ಸ್ ಪ್ರೈವೇಟ್ ಲಿಮಿಟೆಡ್, ಶಿವಮೊಗ್ಗ ಇವರ ಸಹಭಾಗಿತ್ವ ಹಾಗೂ ಪ್ರಾಯೋಜಕತ್ವದಲ್ಲಿ ಜಿಲ್ಲೆಯ 7 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಿಗೆ 5 ಲಕ್ಷ ರು. ವೆಚ್ಚದಲ್ಲಿ ಶುದ್ಧವಾದ ಕುಡಿಯುವ ನೀರಿನ ಘಟಕಗಳನ್ನು ಸಂಸದರ ಮೂಲಕ ಶಾಲೆಗಳಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಡಾ ಅಧೀಕ್ಷಕ ಎಂಜಿನಿಯರ್‌ ಪ್ರಶಾಂತ್, ವಿವಿಧ ರೌಂಟ್ ಟೇಬಲ್ ಮುಖ್ಯಸ್ಥ ಕುಮಾರ್ ಪಾಲ್ ಜೈನ್, ಸುಶೃತ್ ಬೆಳಗೂರ, ಈಶ್ವರ ಸರ್ಜಿ, ಆದಿತ್ಯ ಆಚಾರ್ಯ ಹಾಗೂ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ಮತ್ತು ಶಾಲಾ ಶಿಕ್ಷಕರು ಇದ್ದರು.

PREV

Recommended Stories

ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!
ಜಮೀನು ಖಾಲಿ ಮಾಡಲು ಧಮಕಿ : ಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌