ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಎಚ್ಚರಿಕೆ ಸಂದೇಶ ರವಾನೆ

KannadaprabhaNewsNetwork |  
Published : Jun 29, 2025, 01:32 AM ISTUpdated : Jun 29, 2025, 12:22 PM IST
28ಎಚ್‌ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳ ಹರಿವು 63,816 ಕ್ಯುಸೆಕ್‌ ತಲುಪಿದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ.  | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಶನಿವಾರ ನದಿಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

 ಹೊಸಪೇಟೆ :  ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಶನಿವಾರ ನದಿಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ತುಂಗಭದ್ರಾ ಜಲಾಶಯದ ಒಳ ಹರಿವು 63,816 ಕ್ಯುಸೆಕ್‌ ತಲುಪಿದ್ದು, ಜಲಾಶಯದ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಜಲಾಶಯದಲ್ಲಿ ಈಗ 61.889 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಕ್ರಸ್ಟ್‌ ಗೇಟ್‌ಗಳು ಮುಕ್ಕಾಗಿವೆ ಎಂದು ವರದಿ ಬಂದಿದೆ. ತಜ್ಞರ ಸಲಹೆ ಮೇರೆಗೆ ಈ ವರ್ಷ 80 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಈಗ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜನರಿಗೆ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸ್ಥಳೀಯಾಡಳಿತಗಳಿಗೂ ಮುನ್ನೆಚ್ಚರಿಕೆ ಕ್ರಮವಹಿಸಲು ತುಂಗಭದ್ರಾ ಮಂಡಳಿ ಅಧೀಕ್ಷಕ ಎಂಜನಿಯರ್‌ ನಾರಾಯಣ ನಾಯ್ಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ತುಂಗಾ ನದಿ, ಭದ್ರಾ ನದಿ ಮತ್ತು ವರದಾ ನದಿಯಿಂದ ಹೊರಹರಿವು ಹೆಚ್ಚಾಗುತ್ತಿರುವುದರಿಂದ ಮತ್ತು ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚುತ್ತಿದೆ. ಆದ್ದರಿಂದ, ಜಲಾಶಯಕ್ಕೆ ಒಳಹರಿವಿನ ಆಧಾರದ ಮೇಲೆ, ಯಾವುದೇ ಸಮಯದಲ್ಲಿ 0 ಕ್ಯುಸೆಕ್‌ನಿಂದ 25,000 ಕ್ಯುಸೆಕ್‌ಗಳವರೆಗೆ ನೀರನ್ನು ನದಿಗೆ ಬಿಡಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಾಗರೂಕರಾಗಿರಬೇಕು ಮತ್ತು ಪಕ್ಕದ ತುಂಗಭದ್ರಾ ನದಿಯ ಕೆಳಭಾಗದ ಹಳ್ಳಿಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮನ್ನು ತೆಗೆದುಕೊಳ್ಳಬೇಕು ಎಂದು ಕೋರಲಾಗಿದೆ ಎಂದು ಸಂದೇಶದಲ್ಲಿ ತುಂಗಭದ್ರಾ ಮಂಡಳಿ ತಿಳಿಸಿದೆ.

ಜೂನ್‌ನಲ್ಲೇ ಭರ್ತಿ ಲಕ್ಷಣ:

ತುಂಗಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ. ಈಗಾಗಲೇ ಜಲಾಶಯದಲ್ಲಿ 61.889 ಟಿಎಂಸಿ ನೀರು ಸಂಗ್ರಹವಾಗಿದೆ. ಈಗ ಜಲಾಶಯದ ಒಳ ಹರಿವು 63,816 ಕ್ಯುಸೆಕ್‌ ಇರುವುದರಿಂದ ನಿತ್ಯ 8 ಕ್ಯುಸೆಕ್‌ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹಾಗಾಗಿ ಈ ವರ್ಷ ಜೂನ್‌ ಅಂತ್ಯದೊಳಗೆ ಜಲಾಶಯ ಸಂಪೂರ್ಣ ಭರ್ತಿಯಾಗುವ ಲಕ್ಷಣ ಗೋಚರಿಸಿದೆ. ಜಲಾಶಯದ ಒಳ ಹರಿವು ಏರಿಕೆ ಆಗುತ್ತಲೇ ಸಾಗಿರುವ ಹಿನ್ನೆಲೆ ತುಂಗಭದ್ರಾ ಮಂಡಳಿ ನದಿಪಾತ್ರದ ಜನರು ಮತ್ತು ಜಾನುವಾರುಗಳಿಗೂ ಹಾನಿಯಾಗಬಾರದು ಎಂದು ಆಯಾ ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆ ವಹಿಸಲು ಸಂದೇಶ ರವಾನಿಸಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ 2024ರ ಆಗಸ್ಟ್‌ 10ರಂದು ಕಳಚಿ ಬಿದ್ದಿತ್ತು. ಈಗ ಈ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿದೆ. ಈ ಗೇಟ್‌ಗೆ ಕ್ರಸ್ಟ್‌ ಗೇಟ್‌ ಅಳವಡಿಕೆಗೂ ಭಾರಿ ಒಳ ಹರಿವು ಅಡ್ಡಿಯಾಗಿದೆ.

PREV
Read more Articles on

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್