ಕನ್ನಡಪ್ರಭ ವಾರ್ತೆ ಹೊಸಪೇಟೆ:
ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾದ ಬಳಿಕ ಗಂಡನೇ ಕೊಲೆ ಮಾಡಿರುವ ಪ್ರಕರಣ ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಭೇದಿಸಿದ್ದು, ಈ ಪ್ರಕರಣ ಸಂಬಂಧ ಮಹಿಳೆ ಸೇರಿ ನಾಲ್ವರನ್ನು ಶುಕ್ರವಾರ ಬಂಧಿಸಿದ್ದಾರೆ.ನಗರದ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಡಾಲಿ (24), ಈತನ ತಾಯಿ ಲಕ್ಷ್ಮಿ, ಈತನ ಸ್ನೇಹಿತರಾದ ತರುಣ್, ಅಕ್ಬರ್ ಬಂಧಿತರು.
ಪ್ರಕರಣದ ವಿವರ:ನಗರದ ಚಪ್ಪರದಹಳ್ಳಿಯ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಪ್ರೀತಿ ಮಾಡಿ ದೇವಸ್ಥಾನಯೊಂದರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಮಂಜುನಾಥ ಅಲಿಯಾಸ್ ಡಾಲಿ (24) ಮದುವೆಯಾಗಿದ್ದ. ಬಳಿಕ ತನ್ನ ತಾಯಿ ಲಕ್ಷ್ಮಿ ಜತೆ ಸೇರಿ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುವುದನ್ನು ಶುರು ಮಾಡಿದ್ದ. ಇತ್ತ ತಂದೆ, ತಾಯಿಗಳ ಆಸರೆ ಇಲ್ಲದೇ ಮನೆ ಬಿಟ್ಟು ಬಂದು ಮದುವೆಯಾಗಿದ್ದ ಅಪ್ರಾಪ್ತೆ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಳು. ಮೊದಲೇ ಕಳ್ಳತನ ಮಾಡುವುದನ್ನು ರೂಢಿ ಮಾಡಿಕೊಂಡಿದ್ದ ಮಂಜುನಾಥ ಅಲಿಯಾಸ್ ಡಾಲಿ ಮನೆಗೆ ಬರುವುದನ್ನು ಬಿಟ್ಟು ಬಿಟ್ಟಿದ್ದ. ಇದನ್ನು ಪ್ರಶ್ನಿಸಿದಕ್ಕೆ ಪತ್ನಿ ಜತೆ ಕುಡಿದು ಬಂದು ಜಗಳ ಮಾಡುತ್ತಿದ್ದ. ಸುಮಾರು ಎರಡು ತಿಂಗಳ ಹಿಂದೆ ಬಾಲಕಿಯನ್ನು ಕೊಲೆ ಮಾಡಿ, ತನ್ನ ಸ್ನೇಹಿತರಾದ ತರುಣ್, ಅಕ್ಬರ್ ಜೊತೆಗೂಡಿ ಬೈಕ್‌ನಲ್ಲಿ ಬ್ಯಾಗ್‌ಯೊಂದರಲ್ಲಿ ಹೆಣ ಸಾಗಿಸಿದ್ದಾನೆ. ತುಂಗಭದ್ರಾ ಜಲಾಶಯ ಸಮೀಪದಲ್ಲಿರುವ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸ್ಮಶಾನದಲ್ಲಿ ಮೂವರು ಸೇರಿ ಹೆಣ ಹೂತಿದ್ದಾರೆ. ಬಳಿಕ ಪಾರ್ಟಿ ಕೂಡ ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ಪ್ರಕರಣದ ಕುರಿತು ಬಾಯ್ಬಿಟ್ಟಿದ್ದಾರೆ.
ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಟ್ಟಣ ಠಾಣೆ ಪಿಐ ಲಖನ್ ಮಸಗುಪ್ಪಿ ಮತ್ತು ಕೊಪ್ಪಳ ಗ್ರಾಮಾಂತರ ಠಾಣೆ ಪಿಐ ಸುರೇಶ್, ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ್ ಸ್ಮಶಾನಕ್ಕೆ ತೆರಳಿ ಹೆಣ ಹೊರ ತೆಗೆದು ಪೋಸ್ಟ್ ಮಾರ್ಟಂ ಮಾಡಿದರು. ಈ ಜಾಗಕ್ಕೆ ಆಗಾಗ ಪಾರ್ಟಿ ಮಾಡಲು ಬರುತ್ತಿದ್ದರಿಂದ ಹೆಣವನ್ನು ಇಲ್ಲಿ ಹೂತು ಹಾಕಿದ್ದೇವೆ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಪಟ್ಟಣ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣದ ಜತೆಗೆ ಪೋಕ್ಸೋ ಪ್ರಕರಣ ಕೂಡ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.