ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಗೂಡಿನ ಸಂತೋಷ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ₹2.50 ಲಕ್ಷ ಹಣ ಕಳುವಾದ ಘಟನೆ ಕಳೆದ ತಿಂಗಳು ನಡೆದಿತ್ತು. ಈ ಕುರಿತು ಸಂತೋಷ್ ಅವರು ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಹಲವು ಕಡೆ ಬಲೆ ಬೀಸಿದ ಪರಿಣಾಮ, ಕಳ್ಳತನದಲ್ಲಿ ಬೆಂಗಳೂರು ಮೂಲದ ಬಾಲ ಅಪರಾಧಿಗಳು ಭಾಗಿಯಾಗಿರುವುದು ಪತ್ತೆಯಾಯಿತು. ಇದನ್ನು ಗಮನಿಸಿದ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬೆಂಗಳೂರಿಗೆ ತೆರಳಿ ತನಿಖೆ ಮುಂದುವರೆಸಿದ ವೇಳೆ, ಬೆಂಗಳೂರಿನ ಪೊಲೀಸರು ಈಗಾಗಲೇ ನಾಲ್ವರು ಬಾಲ ಅಪರಾಧಿಗಳನ್ನು ಬಂಧಿಸಿ ಬೆಂಗಳೂರು ಬಾಲ ಮಂದಿರಕ್ಕೆ ಒಪ್ಪಿಸಿದ್ದರು.ನಂತರ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಾಲಮಂದಿರದಲ್ಲಿದ್ದ ನಾಲ್ವರಲ್ಲಿ ಇಬ್ಬರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಇಬ್ಬರೂ ಸಂತೋಷ್ ಅವರ ಮನೆಯಲ್ಲಿ ಕಳ್ಳತನ ನಡೆಸಿದ ವಿಷಯವನ್ನು ಒಪ್ಪಿಕೊಂಡರು.