ಶ್ರೀಶೈಲ ಮಠದ
ಬೆಳಗಾವಿಯಿಂದ- ನಿಲಜಿ (ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ)ಯವರೆಗೆ ಮಾತ್ರ ನಿರ್ಮಾಣವಾಗಿರುವ ಚತುಷ್ಪಥ ರಸ್ತೆಗೆ ಇದೀಗ ಬೆಳಗಾವಿಯ ಸಾಂಬ್ರಾ ನಿಲ್ದಾಣದವರೆಗೆ ವಿಸ್ತರಣೆಗೆ ಹಸಿರು ನಿಶಾನೆ ದೊರೆತಿದೆ.
ನಿಲಜಿ ಗ್ರಾಮದ ನಂತರ ದ್ವಿಪಥ ರಸ್ತೆಯಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನದಾರರ ಪರದಾಟ ತಪ್ಪಿಲ್ಲ. ಈ ಸಂಚಾರ ಸಂಕಟ ನಿಯಂತ್ರಣಕ್ಕೆ ಸಚಿವ ಸತೀಶ ಜಾರಕಿಹೊಳಿ ಮದ್ದು ಅರೆದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದವರೆಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ.ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಬರುತ್ತದೆ. ಈ ರಸ್ತೆ ಮಾರ್ಗದಲ್ಲಿ ವಾಹನ ದಟ್ಟಣೆ ನಿರಂತರವಾಗಿರುತ್ತದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆಯಿಂದ ನಿಲಜಿ ಗ್ರಾಮದವರೆಗೆ ಮಾತ್ರ ಚತುಷ್ಪಥ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ನಿಲಜಿ ಗ್ರಾಮದ ನಂತರ ದ್ವಿಪಥ ರಸ್ತೆ ಇದ್ದು, ವಾಹನ ದಟ್ಟಣೆಯಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ತೀವ್ರ ತೊಂದರೆ ಎದುರಾಗಿತ್ತು. ಸಾಂಬ್ರಾ ನಿಲ್ದಾಣದವರೆಗೆ ಚತುಷ್ಪಥ ರಸ್ತೆ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು.ನಿಲಜಿಯಿಂದ ಸಾಂಬ್ರಾ ವಿಮಾನ ನಿಲ್ದಾಣದವರೆಗೆ 4 ಕಿ.ಮೀ. ರಸ್ತೆಯನ್ನು ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಯೋಜನೆ ತಯಾರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ₹17 ಕೋಟಿ, ರಸ್ತೆ ನಿರ್ಮಾಣ ಕಾಮಗಾರಿಗೆ ₹55 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂದುಕೊಂಡಂತೆ ಸಾಂಬ್ರಾ ನಿಲ್ದಾಣದದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾದರೆ ನಗರದಿಂದ ಏರ್ಪೋರ್ಟ್‌ಗೆ ಹೋಗುವ ಸಂಚಾರ ವ್ಯವಸ್ಥೆ ತೀರಾ ಸುಗಮವಾಗಲಿದೆ.ಲೋಕೋಪಯೋಗಿ ಇಲಾಖೆಯಿಂದ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗುತ್ತದೆ. ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲ ಅಧಿವೇಶನ ವೇಳೆ ಉದ್ಘಾಟನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದ್ದಾರೆ.
- ಮೊಹಮ್ಮದ ರೋಷನ್,
ಜಿಲ್ಲಾಧಿಕಾರಿ.