ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ಸಾವು

KannadaprabhaNewsNetwork |  
Published : May 16, 2026, 04:00 AM IST
House

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿಬಿರುಗಾಳಿ ಸಹಿತ ಭಾರಿ ಮಳೆ ಹಾಗೂ ಸಿಡಿಲಿನ ಹೊಡೆತಕ್ಕೆ ಮನೆಯೊಂದರ ಚಾವಣಿ ಕುಸಿದು ಒಂದೇ ಕುಟಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

  ಸಿಂದಗಿ :  ಬಿರುಗಾಳಿ ಸಹಿತ ಭಾರಿ ಮಳೆ ಹಾಗೂ ಸಿಡಿಲಿನ ಹೊಡೆತಕ್ಕೆ ಮನೆಯೊಂದರ ಚಾವಣಿ ಕುಸಿದು ಒಂದೇ ಕುಟಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

ಮೋರಟಗಿ ಗ್ರಾಮದ ಗುರುನಾಥ ಬಡಿಗೇರ (35), ಜ್ಯೋತಿ ಗುರುನಾಥ ಬಡಿಗೇರ (28) ಅವರ ಮಕ್ಕಳಾದ ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು. ಅದೃಷ್ಟವಶಾತ್‌ ಗುರುನಾಥನ 10 ವರ್ಷದ ಮತ್ತೊಬ್ಬ ಪುತ್ರ ಹಾಗೂ ಆತನ ತಾಯಿ ಬೇರೊಂದು ಮನೆಯಲ್ಲಿ ಮಲಗಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ.

ಏನಿದು ಘಟನೆ?:

ಗ್ರಾಮದ ಹಳೆಯ ಮನೆ (ಜಂತಿ ಮನೆ)ಯಲ್ಲಿ ಈ ಕುಟುಂಬ ಮಲಗಿತ್ತು. ಗುರುವಾರ ತಡರಾತ್ರಿ ಜೋರಾದ ಮಳೆ ಮತ್ತು ಅಬ್ಬರದ ಸಿಡಿಲಿಗೆ ಚಾವಣಿಯು ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಮನೆಯಲ್ಲಿ ಮಲಗಿದ್ದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅದೃಷ್ಟವಶಾತ ಗುರುನಾಥ ಬಡಿಗೇರ ದಂಪತಿಗೆ ಒಟ್ಟು 3 ಜನ ಮಕ್ಕಳು, ಈ ಪೈಕಿ ಮತ್ತೊಬ್ಬ ಅವರ ಪುತ್ರ ವೀರೇಶ (10) ತನ್ನ ಅಜ್ಜಿ ಶಾಂತಾಬಾಯಿ ಜತೆಗೆ ಬೇರೊಂದು ಮನೆಯಲ್ಲಿ ಮಲಗಿದ್ದ. ಹೀಗಾಗಿ ಅವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಬೆಳಗಿನ ಜಾವ ಇದನ್ನು ನೋಡಿದ ಅಕ್ಕಪಕ್ಕದವರು ಬಡಿಗೇರ ಕುಟುಂಬದ ಮನೆಯ ಮುಂದೆ ಜಮಾಯಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತರ ದೇಹಗಳನ್ನು ಹೊರ ತೆಗೆದಿದ್ದಾರೆ.

6 ಗಂಟೆ ಕಳೆದಿದ್ದರೆ 4 ಜೀವ ಉಳಿಯುತ್ತಿದ್ದವು: 

 ಕಳೆದ ಒಂದು ತಿಂಗಳಿನಿಂದ ಗುರುನಾಥ ಬಡಿಗೇರ ತಾನು ವಾಸಿಸುತ್ತಿದ್ದ ಮನೆಯನ್ನು ರಿಪೇರಿ ಮಾಡಿಸುತ್ತಿದ್ದ. ಹೀಗಾಗಿ ತಾನು ವಾಸ ಮಾಡುತ್ತಿದ್ದ ಮನೆಯನ್ನು ಬಿಟ್ಟು ಬಾಡಿಗೆ (ಬೇರೆಯವರ) ಮನೆಯಲ್ಲಿ ವಾಸವಾಗಿದ್ದ. ಇತ್ತ ಸ್ವಂತ ಮನೆಯ ರಿಪೇರಿ ಸಂಪೂರ್ಣವಾಗಿತ್ತು. ಇನ್ನೇನು ಪೂಜೆ ಮಾಡಿಕೊಂಡು ಮನೆ ಪ್ರವೇಶ ಮಾಡುವುದೊಂದೇ ಉಳಿದಿತ್ತು. ಶನಿವಾರ ಅಮವಾಸ್ಯೆ ಇದ್ದುದ್ದರಿಂದ ಶುಕ್ರವಾರವೇ ಪೂಜೆ ಮಾಡಿಕೊಂಡು ತಮ್ಮ ಸ್ವಂತ ಮನೆಗೆ ಹೋಗಲು ಗುರುನಾಥ ಕುಟುಂಬ ನಿರ್ಧರಿಸಿತ್ತು. ಆದರೆ, ದುರಾದೃಷ್ಟವಶಾತ್‌ ದೈವದ ನಿರ್ಣಯವೇ ಬೇರೆ ಇತ್ತು. ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದ ಬಾಡಿಗೆ ಮನೆಯ ಚಾವಣಿ ಕುಸಿದು ನಾಲ್ವರು ಸ್ಥಳದಲ್ಲೇ ಅಸುನೀಗಿದರು. ಕೇವಲ ಆರು ಗಂಟೆಯಷ್ಟೇ ಕಳೆದಿದ್ದರೆ ಪೂಜೆ ಮಾಡಿಕೊಂಡು ಅವರು ತಮ್ಮ ಸ್ವಂತ ಮನೆಗೆ ಹೋಗುವವರಿದ್ದರು. ನಾಲ್ವರ ಪ್ರಾಣ ಕೂಡ ಉಳಿಯುತ್ತಿತ್ತು.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ .ಕೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಘೋಷಣೆ:

ಘಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಎಂ.ಬಿ.ಪಾಟೀಲ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಈ ದುರ್ಘಟನೆ ನಡೆಯಬಾರದಾಗಿತ್ತು. ಗುರುನಾಥ ಬಡಿಗೇರ ಕುಟುಂಬ ತಮ್ಮ ಸ್ವಂತ ಮನೆಯ ದುರಸ್ತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ತಮ್ಮ ಮನೆಗೆ ಆಗಮಿಸುತ್ತಿದ್ದರು. ಆದರೆ ವಿಧಿಯಾಟಕ್ಕೆ ನಾಲ್ವರು ಬಲಿಯಾಗಿದ್ದಾರೆ. ಮೃತರಿಗೆ ತಲಾ ₹ 5 ಲಕ್ಷದಂತೆ ಒಟ್ಟು ₹ 20 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಪರಿಹಾರದ ಮೊತ್ತವನ್ನು ಗುರುನಾಥ ಅವರ ಮಗ ವೀರೇಶನ ಹೆಸರಿನ ಮೇಲೆ ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಅದು ಅವನ ವಿದ್ಯಾಭ್ಯಾಸಕ್ಕೆ ಒದಗಿಸಲಾಗುವುದು ಎಂದರು.

ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಇದೊಂದು ದೊಡ್ಡ ದುರ್ಘಟನೆ. ಇದು ನಮಗೆಲ್ಲ ತುಂಬಾ ನೋವಾಗಿದೆ. ಮೃತರ ಕುಟುಂಬಕ್ಕೆ₹20 ಲಕ್ಷ ಪರಿಹಾರ ಹಣ ನೀಡುತ್ತೇವೆ ಎಂದರು. ಶಾಸಕರ ಭರವಸೆಯಂತೆ ಮೃತರ ಕುಟುಂಬಕ್ಕೆ ಪರಿಹಾರ ಹಣ ಜಮೆ ಮಾಡಿದ್ದಾರೆ. ಗ್ರಾಮಸ್ಥರು ಸಚಿವರ ಶಾಸಕರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಶವಗಳನ್ನು ಹೊರತಂದು ಮೊರಟಗಿಯಲ್ಲಿ ಶವಪರೀಕ್ಷೆ ನಡೆಸಿದರು.

ಮಾಜಿ ಶಾಸಕ ರಮೇಶ ಭೂಸನೂರ, ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ, ಅಶೋಕ ವಾರದ, ಆರೋಗ್ಯಾಧಿಕಾರಿ ಸಂಪತ್ತಕುಮಾರ ಗುಣಾರಿ, ಅಶೋಕ ಕೊಳಾರಿ, ಪ್ರಭು ವಾಲಿಕಾರ, ಸಿಂದಗಿ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಸೇರಿ ಅಗ್ನಿಶಾಮಕ ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಧಾರ್ಮಿಕ ಪರಂಪರೆ ರಕ್ಷಗಾಗಿ ಪಂಚಪೀಠಗಳ ಉಗಮ
ಮಾನವನ ಬದುಕು ವಿಶ್ವ ಮಾನ್ಯವಾಗಲು ಸಂವಿಧಾನ ಬಳಸಿಕೊಳ್ಳಿ