ಜನಪರ ಆಡಳಿತಕ್ಕೆ ನಾಲ್ವಡಿ ಮಾದರಿ: ಡಾ.ನಿಂಗರಾಜ್‌ಗೌಡ

KannadaprabhaNewsNetwork |  
Published : Jun 08, 2026, 01:30 AM IST
೭ಕೆಎಂಎನ್‌ಡಿ-೧ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಗೌರವ ಸಮರ್ಪಿಸಲಾಯಿತು. | Kannada Prabha

ಸಾರಾಂಶ

ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಿ ಮಂಡ್ಯ ಜಿಲ್ಲೆಯ ಬರಡು ನೆಲವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು. ಈ ಯೋಜನೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಈ ಅಣೆಕಟ್ಟು ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಜನಪರ ಆಡಳಿತ ಹೇಗಿರಬೇಕು. ರಾಜನಾದವನು ಜನರ ಅಭ್ಯುದಯವನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದು. ಕರ್ತವ್ಯಬದ್ಧತೆ, ಇಚ್ಛಾಶಕ್ತಿಯೊಂದಿಗೆ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದು ಮೈಸೂರು ವಿಭಾಗೀಯ ಬಿಜೆಪಿ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಅಖಿಲ ಕರ್ನಾಟಕ ಪ್ರಥಮ ಮಹಿಳಾ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಮತ್ತು ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಅಭಿವೃದ್ಧಿಯಲ್ಲಿ ಮೈಸೂರು ರಾಜ್ಯವನ್ನು ಭಾರತಕ್ಕೇ ಮಾದರಿಯಾಗುವಂತೆ ಮುನ್ನಡೆಸಿದ್ದರು. ಇದನ್ನು ಕಂಡು ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಅವರನ್ನು ರಾಜರ್ಷಿ ಎಂದು ಕರೆದಿದ್ದರು. ರಾಜನಾಗಿದ್ದರೂ ಋಷಿಯಂತೆ ಸರಳತೆ, ಧರ್ಮನಿಷ್ಠೆ ಮತ್ತು ಜನಸೇವೆಯನ್ನು ಪಾಲಿಸುತ್ತಿದ್ದರು ಎಂದರು.

ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಿ ಮಂಡ್ಯ ಜಿಲ್ಲೆಯ ಬರಡು ನೆಲವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು. ಈ ಯೋಜನೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಈ ಅಣೆಕಟ್ಟು ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿತು ಎಂದರು.

ಕಾಳಸಂತೆಯಲ್ಲಿ ಮೈಸೂರು ಸಿಲ್ಕ್ ಮಾರಾಟ:

ನಾಲ್ವಡಿ ಅವರ ಕಾಲದಲ್ಲಿ ಸ್ಥಾಪನೆಯಾದ ಮೈಸೂರು ಸಿಲ್ಕ್ ಇಂಡಸ್ಟ್ರೀಯಿಂದ ತಯಾರಿಸಲಾಗುವ ಮೈಸೂರು ರೇಷ್ಮೆ ಸೀರೆ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಮೈಸೂರು ಸಿಲ್ಕ್ ಸೀರೆ ಸುಲಭವಾಗಿ ಜನರಿಗೆ ಸಿಗದಂತೆ ಮಾಡಿದೆ. ಕಾಳಸಂತೆಯಲ್ಲಿ ಮಾರಾಟವಾಗುವುದಕ್ಕೆ ಅವಕಾಶ ಮಾಡಿಕೊಟ್ಟು ಜನರನ್ನು ಪರದಾಡುವಂತೆ ಮಾಡಿದೆ. ಮುಂಜಾನೆ ೪ ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ನೂಕು ನುಗ್ಗಲಿನಲ್ಲಿ ಸೀರೆಗಳನ್ನು ಖರೀದಿಸುವಂತಹ ವಾತಾವರಣ ಸೃಷ್ಟಿಸಿದೆ ಎಂದು ಟೀಕಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕರ್ನಾಟಕ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಯುವ ಮುಖಂಡ ಕೆ.ಯೋಗಾನಂದ, ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷೆ ಹಾಗೂ ಕವಿಯತ್ರಿ ಬಿ.ಆರ್. ಉಮಾ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಆನಂದ್ ತಿರುಮಲ, ನವೀದ್ ಮುಲ್ಲಾ, ಆಧ್ಯಾತ್ಮ ಚಿಂತಕಿ ಡಾ.ಪೂರ್ಣಿಮಾ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್‌ಕುಮಾರ್, ನಾರಾಯಣಸ್ವಾಮಿ, ಹೇಮಾ ಉಪಸ್ಥಿತರಿದ್ದರು.

ಭಾರತ ರತ್ನ ಎಂದೋ ಸಿಗಬೇಕಿತ್ತು: ಡಾ.ಕೆ.ಚಂದ್ರಶೇಖರ್

ಮೈಸೂರು ಸಂಸ್ಥಾನದ ಆಡಳಿತದಲ್ಲಿ ಸುವರ್ಣಯುಗ ಸೃಷ್ಟಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಎಂದೋ ಭಾರತ ರತ್ನ ಪ್ರಶಸ್ತಿ ಸಿಗಬೇಕಿತ್ತು. ಇಂತಹ ಮಹನೀಯರಿಗೆ ಭಾರತ ರತ್ನ ನೀಡುವುದರಿಂದ ಪ್ರಶಸ್ತಿಯ ಗೌರವ ಹೆಚ್ಚುತ್ತದೆ ಎಂದು ಖ್ಯಾತ ವೈದ್ಯ ಡಾ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ರಾಜನಾಗಿ ಸಾಮ್ರಾಜ್ಯ ವಿಸ್ತರಣೆಯತ್ತ ಒಲವನ್ನು ತೋರಲಿಲ್ಲ. ಬದಲಾಗಿ ಜನರ ಅಗತ್ಯತೆಗಳನ್ನು ಮನಗಂಡು ಅವುಗಳನ್ನು ಪೂರೈಸುವುದಕ್ಕೆ ಟೊಂಕಕಟ್ಟಿ ನಿಂತರು. ಕೈಗಾರಿಕೆ, ಆರೋಗ್ಯ, ರೈಲ್ವೆ, ವಿದ್ಯುತ್, ಕೃಷಿ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವಲಯಗಳಲ್ಲೂ ಅಭಿವೃದ್ಧಿಯ ಹೊಂಬೆಳಕನ್ನು ಮೂಡಿಸಿದರು. ಅತಿ ಕಡಿಮೆ ಅಧಿಕಾರವಧಿಯಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿ ತೋರಿಸಿದರು ಎಂದು ಗುಣಗಾನ ಮಾಡಿದರು.

ಮಿಲ್ಲರ್ ಕಮಿಟಿ ರಚನೆ ಮಾಡಿ ಆಡಳಿತದಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೊಳಿಸಿದರು. ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ನಾಲ್ವಡಿ ನಂತರದ ಕಾಲಘಟ್ಟದಲ್ಲಿ ಅವರು ನೀಡಿದ ಕೊಡುಗೆಗಳನ್ನು ಉಳಿಸಿಕೊಂಡು ಹೋಗುವುದಕ್ಕೂ ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಲಾಶಯ ಹಿನ್ನೀರಿನ ಗ್ರಾಮಗಳಿಗೆ ಆದ್ಯತೆ
ಕಾಡಲ್ಲಿ ರೌಡಿಪಾರ್ಟಿ, ತಲೆ ತಗ್ಗಿಸುವ ವಿಷಯ: ರೈತಸಂಘ