ಶ್ರೀಕಾಂತ ಹೆಮ್ಮಾಡಿ
ಕನ್ನಡಪ್ರಭ ವಾರ್ತೆ ಕುಂದಾಪುರಹ್ವಾಯ್ ಬನಿಯೇ..ಬಿಸ್ಲಗ್ ಬಂದಿರಿ..ಕುಡುಕ್ ತಂಪಾದ್ ಕಬ್ಬಿನ್ ಜ್ಯೂಸ್ ಇತ್ತ್ ಬನಿ...ಆಲೋಚ್ನಿ ಮಾಡ್ಬೇಡಿ ಹ್ವಾಯ್.. ತಂಪು-ತಂಪು ಮಜ್ಜಿಗೆ ಕುಡಿನಿ..ಬನ್ನಿ ಸರ್..ಬನ್ನಿ ಮೇಡಂ..ಒಳ್ಳೊಳ್ಳೆ ಆಫರ್ ಅಲ್ ಬಟ್ಟಿಯೂ ಇತ್ತ್ ತಕಣಿ.. ಆಯೋಚ್ನಿ ಮಾಡ್ಬೇಡಿ..ಇಲ್ ಬನ್ನಿ..
ಇದು ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಡಾ. ಬಿ.ಬಿ ಕಾಲೇಜಿನ ಬಿಎಂಎಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವ್ಯವಹಾರ ಮೇಳ ''''''''''''''''ವಿ-ಗ್ರೊ-2025'''''''''''''''' ದಲ್ಲಿ ಕಂಡುಬಂದ ಚಿತ್ರಣ.ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಕೌಶಲ್ಯ ಬೆಳೆಸುವ ಉದ್ದೇಶದಿಂದ ಕುಂದಾಪುರ ಎಜ್ಯುಕೇಶನಲ್ ಸೊಸೈಟಿ ಆಡಳಿತದ ಕುಂದಾಪುರ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ದ್ವಿತೀಯ, ತೃತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವ್ಯಾಪಾರ ಮೇಳ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ವ್ಯವಹಾರ ಮೇಳದಲ್ಲಿ ಒಟ್ಟು ಎಂಟು ಅಂಗಡಿಗಳಿದ್ದು, ಒಂದೊಂದು ಅಂಗಡಿಗಳಲ್ಲಿ ಆರೇಳಕ್ಕೂ ಮಿಕ್ಕಿ ಸ್ಟಾಲ್‌ಗಳಿದ್ದವು. ಪ್ರತೀ ಮಳಿಗೆಯಲ್ಲಿಯೂ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಸೆಲ್ಫಿ ಪಾಯಿಂಟ್, ಸ್ವಾಗತಕಾರರು ಸೇರಿದಂತೆ ಹತ್ತು, ಹಲವು ವಿಭಿನ್ನ, ವೈಶಿಷ್ಟ್ಯಗಳಿಂದ ಕೂಡಿದ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿದವು.ವ್ಯವಹಾರಕ್ಕೆ ಮಾತ್ರ ಮೇಳವಲ್ಲ!:
ಒಂದು ದಿನದ ಮಟ್ಟಿಗೆ ವ್ಯಾಪಾರ ಮಾತ್ರವಲ್ಲದ್ದೇ, ಮೂರು ಹಂತಗಳಲ್ಲಿ ವ್ಯವಹಾರ ಮೇಳ ಆಯೋಜಿಸಿದೆ. ಮೊದಲ ಹಂತವಾಗಿ ವಿದ್ಯಾರ್ಥಿಗಳು ವ್ಯಾಪಾರ ಯೋಜನೆಗಳನ್ನು ಪ್ರಸ್ತುತಪಡಿಸಿದ ಬಳಿಕ ಎರಡನೇ ಹಂತವಾಗಿ ಉದ್ಯೋಗ ಮೇಳ ನಡೆಸಲಿದ್ದು, ಇನ್ನೆರಡು ದಿನಗಳ ಬಳಿಕ ಮಾರಾಟದ ಸಂಪೂರ್ಣ ಆಯವ್ಯಯ ಪಟ್ಟಿಯನ್ನು ಮೂರನೇ ಹಂತದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಎಂಟೂ ಮಳಿಗೆಗಳಲ್ಲಿಯೂ ತಲಾ ಒಂದೊಂದು ಉತ್ಪನ್ನಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಅದರ ಕುರಿತಾದ ಜಾಹೀರಾತು ಪ್ರದರ್ಶನ ಮಾಡಿದ ಬಳಿಕ ಉದ್ಯೋಗ ಮೇಳದಲ್ಲಿ ವ್ಯಾಪಾರಕ್ಕೆ ಇಡಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳನ್ನು ಕ್ರೋಢಿಕರಿಸಿಕೊಂಡು ತೀರ್ಪುಗಾರರು ಅಂಕ ಕೊಡುವುದರ ಮೂಲಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ.ಹರಾಜು ಪ್ರಕ್ರಿಯೆಯಲ್ಲಿ ಮಳಿಗೆ:
ವ್ಯವಹಾರ ಯೋಜನೆ ಪ್ರಸ್ತುತಪಡಿಸಿದ ನಂತರ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುತ್ತಿದ್ದು, ಎಂಟೂ ಮಳಿಗೆಗಳನ್ನು ವಿದ್ಯಾರ್ಥಿಗಳು ಪೈಪೋಟಿಯ ಮೂಲಕ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರತಿಕ್ರಿಯಿಸಿದ್ದಾರೆ.ಖಾದ್ಯಗಳ ರುಚಿ ಸವಿದ ಗ್ರಾಹಕರು:
ಪಾನಿಪುರಿ, ಸೇವ್ ಪುರಿ, ಗೋಲ್ಗೊಪ್ಪ, ಚುರ್ಮುರಿ, ಬೇಬಿ ಕಾರ್ನ್ ಪ್ರೈ, ಪಾಪ್ ಕಾರ್ನ್, ಸಮೋಸಾ, ಐಸ್ಕ್ರೀಮ್, ಸೋಡಾ ಶರಬತ್, ಕಬ್ಬಿನಜ್ಯೂಸ್, ಗೋಲಿ ಸೋಡಾ, ಎಳನೀರು, ಮಜ್ಜಿಗೆ ಮೊದಲಾದ ತಿನಿಸಿಗಳು, ಬಗೆಬಗೆಯ ತಂಪು ಪಾನೀಯಗಳನ್ನು ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಇವುಗಳೆಲ್ಲವನ್ನೂ ಖರೀದಿಸಿ ಅದರ ರುಚಿ ಸವಿದರು.ಜೊತೆಗೆ ಸ್ಟೇಶನರಿ, ಕಂಗನ್ ಸ್ಟೋರ್ಸ್, ತೆಂಗಿನಕಾಯಿ ಅಂಗಡಿ, ವೀಳ್ಯದೆಲೆ, ವಿವಿಧ ಹೂವಿನ ಗಿಡಗಳ ನರ್ಸರಿ, ಬಟ್ಟೆ ಅಗಡಿ, ಚಪ್ಪಲಿ ಅಂಗಡಿ, ಕರಕುಶಲ ವಸ್ತುಗಳ ವ್ಯಾಪಾರ ಮಳಿಗೆಯಲ್ಲಿ ಗ್ರಾಹಕರು ಮುಗಿಬೀಳುವ ದೃಶ್ಯಗಳು ಕಂಡುಬಂದವು. ಬೆಳಗ್ಗೆ ಕಾಲೇಜಿನ ಅಧ್ಯಕ್ಷರಾದ ಬಿಎಮ್ ಸುಕುಮಾರ್ ಶೆಟ್ಟಿ ಉದ್ಘಾಟಿಸಿದ ಬಳಿಕ ಆರಂಭಗೊಂಡ ವ್ಯಾಪಾರ ಮಳಿಗೆ ಸಂಜೆಯ ತನಕವೂ ನಡೆಯಿತು.
..............ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿದ್ಯಾರ್ಥಿಗಳಂತೆ ಪ್ರಯೋಗಾಲಯದ ಅನುಭವ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತರಗತಿಯೊಳಗೆ ಬೋಧನೆ ಮಾಡುವುದು ಮಾತ್ರವಲ್ಲಲ್ಲದೆ, ಅವರಿಗೂ ಪ್ರಾಯೋಗಿಕ ಕೌಶಲ್ಯ ಕಲಿಸಬೇಕೆನ್ನುವ ದೃಷ್ಠಿಯಿಂದ ಈ ವ್ಯವಹಾರ ಮೇಳ ಆಯೋಜನೆ ಮಾಡಿದ್ದೇವೆ.-ಉಮೇಶ್ ಶೆಟ್ಟಿ ಕೊತ್ತಾಡಿ, ಪ್ರಾಂಶುಪಾಲ...................
ಹಲವು ದಿನಗಳ ನಮ್ಮ ತಂಡದ ಶ್ರಮ ಇಂದು ಕಾರ್ಯರೂಪಕ್ಕೆ ಬಂದಿದೆ. ನಾವೇ ಬಂಡವಾಳ ಹಾಕಿ ಲಾಭಾಂಶವಿಟ್ಟು ಮಾರಾಟ ಮಾಡಿ ಅದರಿಂದ ಬಂದ ಲಾಭವನ್ನು ನಾವೇ ಹಂಚಿಕೊಳ್ಳುತ್ತೇವೆ.-ಪೂಜಾ ಶೆಟ್ಟಿ, ವಿದ್ಯಾರ್ಥಿನಿ.