ರೈತರಿಂದ ಕಡಲೆ ಖರೀದಿಸಿ ವಂಚನೆ, ಪ್ರತಿಭಟನೆ

KannadaprabhaNewsNetwork | Published : Sep 25, 2024 12:48 AM

ಸಾರಾಂಶ

ಸಾಲಸೂಲ ಮಾಡಿ ರೈತರು ಕಡಲೆ ಬೆಳೆದು ಮಾರಾಟ ಮಾಡಿ ಹಣವಿಲ್ಲದೆ ಸಾಲದ ಬಡ್ಡಿ ತೀರಿಸಲು ಆಗದೆ ತಮ್ಮ ಜೀವನ ಕೊನೆಗೊಳಿಸುವ ಹಂತಕ್ಕೆ ಬಂದಿದ್ದಾರೆ

ಗದಗ: ರೈತರಿಂದ ಎನ್.ಆರ್.ಎಲ್.ಎಂ ಅಡಿಯಲ್ಲಿ ಕಡಲೆ ಖರೀದಿಸಿ 9 ತಿಂಗಳವರೆಗೆ ಹಣ ನೀಡದೆ ಅಂದಾಜು ₹ 9.50 ಕೋಟಿ ವಂಚಿಸಿದ ಸಂಸ್ಥೆ ಮತ್ತು ವರ್ತಕರ ವಿರುದ್ಧ ರಾಜ್ಯ ಡಾ. ಪಂಡಿತ ಪುಟ್ಟರಾಜ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ ನಡೆಸಿ ಘೋಷಣೆ ಕೂಗಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ರೈತರು ಆಕ್ರೋಶ ಹೊರಹಾಕಿದರು.

ಜಿಪಂ ಹಾಗೂ ತಾಪಂನಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್.ಆರ್.ಎಲ್.ಎಂ)ಗದಗ ಒಕ್ಕೂಟದ ಅಡಿ ಕೃಷಿ ಸಖಿ ಎಂಬ ಮಹಿಳಾ ಸಂಘಟನೆಗಳ ಮೂಲಕ ಯೋಜನೆ ಪ್ರಾರಂಭಿಸಿ ನೂರಾರು ರೈತರಿಂದ 3.250 ಟನ್ ಕಡಲೆ ಖರೀದಿಸಿ ರೈತರಿಗೆ ಅಂದಾಜು ₹9.50 ಕೋಟಿ ಖರೀದಿದಾರ ದಾವಣಗೇರಿಯ ಮಾರುತಿಗೌಡ ಎನ್ನುವ ವ್ಯಕ್ತಿ ವಂಚಿಸಿದ್ದಾರೆ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಸೂಚನೆಯಂತೆ ಖರೀದಿ ಮಾಡಿದ್ದಾರೆ. ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಖರೀದಿದಾರನಿಗೆ ಸಹಕಾರವಾಗುವ ರೀತಿಯಲ್ಲಿ ರೈತರ ಬಾಕಿ ಹಣ ಉಳಿಸಿಕೊಂಡಿದ್ದಾರೆ. ಇದರಿಂದ ರೈತರು ಹಣ ಪಡೆಯಲು ಜಿಪಂ, ತಾಪಂ ಅಲೆದಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದರು ಈವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸಾಲಸೂಲ ಮಾಡಿ ರೈತರು ಕಡಲೆ ಬೆಳೆದು ಮಾರಾಟ ಮಾಡಿ ಹಣವಿಲ್ಲದೆ ಸಾಲದ ಬಡ್ಡಿ ತೀರಿಸಲು ಆಗದೆ ತಮ್ಮ ಜೀವನ ಕೊನೆಗೊಳಿಸುವ ಹಂತಕ್ಕೆ ಬಂದಿದ್ದಾರೆ. ಆದ್ದರಿಂದ ರೈತರಿಗೆ ಬರತಕ್ಕಂತಹ ಹಣ ಬಡ್ಡಿ ಸಮೇತವಾಗಿ 30 ದಿನಗಳ ಒಳಗಾಗಿ ಕೊಡಿಸುವಂತೆ ಒತ್ತಾಯಿಸಿದರು.

ಈ ವೇಳೆ ರಾಜ್ಯ ಡಾ.ಪಂ.ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಪಿ.ಮುಳಗುಂದ, ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ, ಸಾವಿತ್ರಿ ಸೋಮನಕಟ್ಟಿ, ದಾವಲಸಾಬ್‌ ನಾಗನೂರ, ಎಂ.ಪಿ. ಶಲವಡಿ, ಶಬ್ಬೀರ ಪೀರಜಾದೆ, ರೇಖಾ ಬೆಂತೂರ, ಕವಿತಾ ಗುಡದೂರ, ರೇಣುಕಾ ನಾಗಾವಿ, ಈರಪ್ಪ ಹೊಸಳ್ಳಿ, ನೂರುಲ್ಲಾಖಾನ ಪಠಾಣ, ಬಾಜಿಗಾರ ಶೇಖ, ಪ್ರಭಾಕರ ಜುಟ್ಲದ, ಮುತ್ತುರಾಜ ಶ್ಯಾವಿ, ಕೃಷ್ಣಪ್ಪ ಜಾಧವ, ಹನಮಂತಪ್ಪ ಪೂಜಾರ, ಸೋಮರಡ್ಡಿ ಲಂಗದಹಳ್ಳಿ, ದ್ಯಾಮಣ್ಣ ಬಡಿಗೇರಿ, ಹನಮಂತಪ್ಪ ಮಲಸಮುದ್ರ, ರಾಮಪ್ಪ ಜೇಡರ, ಫಾತಿಮಾ ಓಲೆಕಾರ, ಶಕುಂತಲಾ ಚಂದ್ರಗೌಡರ, ಚನ್ನಪ್ಪ ಚಿಟ್ಟಿ, ವೆಂಕರಡ್ಡಿ ಮ್ಯಾಗೇರಿ, ಹುಸೇನಸಾಬ ಓಲೇಕಾರ, ಕಪ್ಪತ್ತಪ್ಪ ಗುಡದೂರ, ಬೂದೇಶ ಪೂಜಾರ, ಚೆನ್ನಪ್ಪ ಪೂಜಾರಿ, ಮಹೇಶಗೌಡ ಸುಬೇದಾರ, ಸುರೇಶ ಪರಣ್ಣವರ, ಕಿಶನ್ ನಂದಿ, ಶರಣಪ್ಪ ಮುರಳಿ, ಚಂದ್ರಗೌಡ ಪಾಟೀಲ, ಬಸವರಾಜ ಬಾಳಿಕಾಯಿ, ನಾರಾಯಣ ಬೀರಸಲ್, ಎಸ್.ಬಿ. ಮುಲ್ಲಾ ಹಾಗೂ ಸಾವಿರಾರು ರೈತರು ಇದ್ದರು.

Share this article