ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕು ಸೇರಿದಂತೆ ಗ್ರಾಮೀಣ ಭಾಗದ ರಸಗೊಬ್ಬರಗಳ ಮಾರಾಟಗಾರರು ಡಿಎಪಿ ಹಾಗೂ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಡಿಎಪಿ ಹಾಗೂ ಯೂರಿಯಾ ಗೊಬ್ಬರದ ಜತೆ ಹೆಚ್ಚುವರಿ ಔಷಧ ಅಥವಾ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿದ್ದಾರೆ.ಈ ವರ್ಷ ಸಕಾಲಕ್ಕೆ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಅವಧಿಯಲ್ಲಿ ರೈತರು ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಫಲವತ್ತತೆಯಿಂದ ನಳನಳಿಸುತ್ತಿರುವುದರಿಂದ ಸಂತಸಗೊಂಡಿರುವ ರೈತರು ಹೆಚ್ಚಿನ ಇಳುವರಿ ಪಡೆಯಲು ಬೆಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಡಿಎಪಿ ಹಾಗೂ ಯೂರಿಯಾ ಗೊಬ್ಬರ ಬಳಸುತ್ತಿದ್ದಾರೆ.
ಆದರೆ ರೈತರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಜತೆಗೆ ಯೂರಿಯಾ ಗೊಬ್ಬರ ಬೇಕಾದರೆ ಅದರ ಜತೆ ಅವರು ನೀಡುವ ಹೆಚ್ಚುವರಿ ಗೊಬ್ಬರದ ಹಣಕ್ಕೆ ಯಾವುದೇ ರಸೀದಿ ಇಲ್ಲದೆ ಪಾವತಿಸುವ ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ.ಗೊಬ್ಬರದ ಮೇಲೆ ಸರ್ಕಾರದ ಸಹಾಯಧನ ಕಳೆದು ಒಂದು ಚೀಲಕ್ಕೆ ಡಿಎಪಿ 1350 ರು. ದರ ಇದೆ. 1450 ಹಾಗೆ 265.50 ರು. ದರ ಇದೆ. ಆದರೆ ಕನಿಷ್ಠ ಅಂದರೂ 300- 400 ರು. ಪಡೆದು ರಸೀದಿ ನೀಡದೆ ವಂಚಿಸಲಾಗುತ್ತಿರುವ ಬಗ್ಗೆ ಯುವ ರೈತ ಶ್ರೀಧರ್ ಕುಳಗೇರಿ ಸೇರಿದಂತೆ ಹಲವು ರೈತರು ಆಕ್ಷೇಪಿಸಿದ್ದಾರೆ.
ಈ ವ್ಯವಹಾರಕ್ಕೆ ಕಡಿವಾಣ ಹಾಕಿ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ನೆರವಾಗಬೇಕಿರುವ ಕೃಷಿ ಇಲಾಖೆಯ ಅಧಿಕಾರಿಗಳು ಇದಾವುದೂ ನನಗೆ ಸಂಬಂಧಿಸಿದ್ದಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ವರ್ತನೆ ಮಾರಾಟಗಾರರಿಗೆ ಇನ್ನಷ್ಟು ಪ್ರಚೋದನೆಯಾಗಿದೆ ಎಂಬುದು ರೈತರ ಆರೋಪ.ಗೊಬ್ಬರ ಚೀಲಕ್ಕೆ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಶುಕ್ರವಾರ ಬೆಳಿಗ್ಗೆ ಯಡ್ರಾಮಿ ತಾಲೂಕು ಸೇರಿದಂತೆ ಗ್ರಾಮೀಣ ಭಾಗದ ಆಗ್ರೋ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ನೋಟಿಸ್ ಕೂಡ ನೀಡಿದ್ದೇನೆ, ಆದರೂ ಕೆಲವು ಆಗ್ರೋ ಕೇಂದ್ರಗಳು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ವಿಷಯ ಪುನಃ ಕೇಳಿಬರುತ್ತಿದ್ದು, ಅಂತಹ ಆಗ್ರೋಗಳ ಲೈಸೆನ್ಸ್ ಸಸ್ಪೆಂಡ್ ಮಾಡಲಾಗುವುದು.
ಚಂದ್ರಕಾಂತ ಜೀವನಗಿ, ಸಹಾಯಕ ಕೃಷಿ ನಿರ್ದೇಶಕರು,ಕೃಷಿ ಇಲಾಖೆ ಜೇವರ್ಗಿ
ನಾಗರಹಳ್ಳಿ ಗ್ರಾಮದ ಶ್ರೀ ಸಾಯಿ ವೆಂಕಟೇಶ್ ಟ್ರೇಡರ್ ಮಾಲೀಕ ಒಂದು ಚೀಲ ಗೊಬ್ಬರಕ್ಕೆ ಎಷ್ಟು ಹಣ ಹೇಳುತ್ತಾರೋ ಅಷ್ಟಕ್ಕೆ ಖರೀದಿ ಮಾಡಬೇಕು. ಒಂದು ವೇಳೆ ಹಣ ಹೆಚ್ಚಿಗೆ ಆಯ್ತು ಸರ್ ಅಂತ ಪ್ರಶ್ನೆ ಮಾಡಿದರೆ ಸಾಕು ನಮ್ಮ ಹತ್ತಿರ ಗೊಬ್ಬರ ಇಲ್ಲ ಖಾಲಿಯಾಗಿದೆ ಅಂತ ಹೇಳುತ್ತಾರೆ ಸರ್. ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ವಿಷಯ ವರದಿಗಾರರ ಮುಂದೆ ಹೇಳಿದರೆ ಮುಂದೆ ನನಗೆ ಗೊಬ್ಬರವನ್ನೇ ಕೊಡುವುದಿಲ್ಲ ಸರ್.ಹೆಸರು ಹೇಳಲು ಇಚ್ಚಿಸಿದ, ರೈತ, ನಾಗರಹಳ್ಳಿ