ಬೆಳೆ ವಿಮೆ ಯೋಜನೆ ಕಂತು ಪಾವತಿಗೆ ಕಾಲಾವಕಾಶ ನೀಡದೆ ವಂಚನೆ: ಭಾಕಿಸಂ ಆರೋಪ

KannadaprabhaNewsNetwork |  
Published : Jun 25, 2025, 11:47 PM IST
25ಬೆಳೆವಿಮೆ | Kannada Prabha

ಸಾರಾಂಶ

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ರೈತರ ಪಾಲಿನ ಒಂದು ಉತ್ತಮ ವ್ಶೆಜ್ಞಾನಿಕ ವಿಮಾ ಯೋಜನೆಯಾಗಿದೆ. ಆದರೆ ಯೋಜನೆಯ ಪ್ರೀಮಿಯಂ ಪಾವತಿಗೆ ನಾಲ್ಕೇ ದಿನ ಅವಕಾಶ ನೀಡಿ ರೈತರನ್ನು ವಂಚಿಸುಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಆಕ್ಷೇಪಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ರೈತರ ಪಾಲಿನ ಒಂದು ಉತ್ತಮ ವ್ಶೆಜ್ಞಾನಿಕ ವಿಮಾ ಯೋಜನೆಯಾಗಿದೆ. ಆದರೆ ಯೋಜನೆಯ ಪ್ರೀಮಿಯಂ ಪಾವತಿಗೆ ನಾಲ್ಕೇ ದಿನ ಅವಕಾಶ ನೀಡಿ ರೈತರನ್ನು ವಂಚಿಸುಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಆಕ್ಷೇಪಿಸಿದೆ.೨೦೧೬ರಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅಡಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಈ ವಿಮಾ ಯೋಜನೆ ಅಳವಡಿಸಲಾಗಿದ್ದು. ಗ್ರಾಮವಾರು ಮಳೆಯ ಪ್ರಮಾಣಕ್ಕನುಗುಣವಾಗಿ ಪರಿಹಾರ ನೀಡುವ ಮೂಲಕ ರೈತರ ಪಾಲಿಗೆ ಒಂದು ಉಪಯುಕ್ತ ವಿಮಾ ಯೋಜನೆಯಾಗಿದೆ.

ಅಡಕೆ ತೋಟಕ್ಕೆ ಪ್ರತೀ ಹೆಕ್ಟೇರ್‌ಗೆ ೧,೨೮,೦೦೦ ರು. ಗರಿಷ್ಟ ಪರಿಹಾರ ಮೊತ್ತವಾಗಿದ್ದು, ಅದರಲ್ಲಿ ಶೇ ೫ ಅಂದರೆ ೬,೪೦೦ ರು. ಪ್ರೀಮಿಯಂ ಹಣವಾಗಿ ರೈತರು ಪಾವತಿಸಬೇಕು. ವಿಮಾ ಕಂಪನಿಗಳನ್ನು ಬಿಡ್ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಇದಾಗಿದ್ದು, ನಿಗದಿಗೊಳಿಸುವ ಪ್ರೀಮಿಯಂ ಹಣದಲ್ಲಿ ರೈತರ ಪಾವತಿಯನ್ನು ಕಳೆದು ಕಡಿಮೆಯಾದದ್ದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಭರಿಸಿ ಕೊಡುತ್ತವೆ. ಅದೇ ರೀತಿ ಕಾಳುಮೆಣಸು ಬೆಳೆಗೂ ಕೂಡ ಹೆಕ್ಟೇರ್‌ಗೆ ೪೭,೦೦೦ ರು. ಗರಿಷ್ಟ ಪರಿಹಾರದ ಮೊತ್ತ ಆಗಿದ್ದು, ಅದರಲ್ಲಿ ರೈತರು ೨,೩೫೦ ರು. ಪಾವತಿ ಮಾಡಬೇಕಾಗಿದೆ.ಆದರೆ, ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲು ಪಾವತಿಸಲು ನಿರಾಸಕ್ತಿ ಹೊಂದಿದ್ದು, ರೈತರು ಈ ವಿಮಾ ಯೋಜನೆಯಿಂದ ಹೊರಗುಳಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಅಧಿಕಾರಿ ವಲಯದಲ್ಲಿ ಕೇಳಿ ಬರುತ್ತಿದೆ.ಮೊದಲು ವಿಮಾ ಪ್ರೀಮಿಯಂ ಪಾವತಿಗೆ ಸರ್ಕಾರ 15 - 20 ದಿನಗಳ ಕಾಲಾವಕಾಶ ನೀಡಿ ಪ್ರಚಾರ ನೀಡುತ್ತಿದ್ದು, ಈಗ ಬರಬರುತ್ತಾ ಕಳೆದೆರಡು ವರ್ಷಗಳಿಂದ ಕೇವಲ 4 - 5 ದಿನ ಅವಕಾಶ ನೀಡಿ ಪ್ರೀಮಿಯಂ ಪಾವತಿಸಲು ತಿಳಿಸುತ್ತಿದೆ. ಮೊದಲೇ ಅಡಕೆ ಮರಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ, ಭತ್ತದ ನಾಟಿ ಕಾರ್ಯದಲ್ಲಿ ಮಗ್ನರಾಗಿರುವ ರೈತರಿಗೆ ತರಾತುರಿಯಲ್ಲಿ ಹಣ ಹೊಂದಿಸಿ, ದಾಖಲೆಗಳನ್ನು ನೀಡಿ, ಪ್ರೀಮಿಯಂ ಹಣ ಪಾವತಿಸುವುದು ಕಷ್ಟವಾಗುತ್ತಿರುವ ಕಾರಣ, ಅನೇಕರು ಈ ವಿಮಾ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಸರ್ಕಾರ ಮತ್ತು ಇಲಾಖೆಯ ಈ ಪ್ರಯತ್ನವನ್ನು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬಲವಾಗಿ ಆಕ್ಷೇಪಿಸುತ್ತದೆ. ಹಾಗೂ ಸಮಯಾವಕಾಶವನ್ನು ವಿಸ್ತರಿಸುವ ಬಗ್ಗೆ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಸೇರಿದಂತೆ ಜಿಲ್ಲಾಡಳಿತ, ಜಿಲ್ಲೆಯ ಸಂಸದರು, ಶಾಸಕರಿಗೂ ಪತ್ರ ಬರೆದು ಮನವಿ ಮಾಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌