ತಟಗಾರದ ಅಂಗನವಾಡಿಯಲ್ಲಿ ಆಹಾರ, ಧಾನ್ಯ ನೀಡದೇ ವಂಚನೆ

KannadaprabhaNewsNetwork | Published : Sep 6, 2024 1:04 AM

ಸಾರಾಂಶ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ಗುರುವಾರ ಬೆಳಗ್ಗೆ ತಟಗಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು.

ಯಲ್ಲಾಪುರ: ತಾಲೂಕಿನ ತಟಗಾರ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪುಟಾಣಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ನೀಡಬೇಕಿದ್ದ ಮೊಟ್ಟೆ, ಅಕ್ಕಿ ಸೇರಿದಂತೆ ಹಲವು ಧಾನ್ಯಗಳನ್ನು ಪಾಲಕರ ನಕಲಿ ಸಹಿ ಹಾಕಿ ನುಂಗಿ ಹಾಕುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬುಧವಾರ ಸಿಡಿಪಿಒ ಅವರು ಈ ಅಂಗನವಾಡಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ಗುರುವಾರ ಬೆಳಗ್ಗೆ ತಟಗಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವ್ಯವಹಾರ ಬೆಳಕಿಗೆ ಬಂದಿದ್ದು, ಅನೇಕ ಫಲಾನುಭವಿಗಳು ಸೌಲಭ್ಯಗಳೇ ದೊರಕಿಲ್ಲ. ಅಲ್ಲದೇ ದಾಖಲೆಯಲ್ಲಿ ಇರುವ ಸಹಿ ನಮ್ಮದಲ್ಲ, ನಮ್ಮ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ದೂರಿದರು.

ಈ ವೇಳೆ ಸಾತುಗದ್ದೆಯ ವಿಶ್ವನಾಥ ಭಾಗ್ವತ್ ಮಾತನಾಡಿ, ಹಲವು ವರ್ಷಗಳಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಬೇಕಾದ ಸೌಲಭ್ಯಗಳನ್ನು ಇಲ್ಲಿ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರದಿಂದಲೇ ಬಂದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಶೈನಾಜ್ ಶೇಖ್‌ ತಿಳಿಸಿದ್ದು, ಬೇರೆ ಅಂಗನವಾಡಿಗಳಿಗೆ ದೊರೆಯುವ ಸೌಕರ್ಯ ಇಲ್ಲಿ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಶೀಗೆಪಾಲಿನ ಪ್ರಸನ್ನ ಭಟ್ಟ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಫಲಾನುಭವಿಗಳಿಗೆ ಸೌಲಭ್ಯ ನೀಡದೇ ವಂಚಿಸಲಾಗುತ್ತಿದೆ. ಊರಿನವರು ಪ್ರಶ್ನಿಸಿದರೂ ಸರಿಯಾದ ಉತ್ತರ ದೊರೆಯುತ್ತಿಲ್ಲ. ಇದರಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗುತ್ತಿರಲಿಲ್ಲ ಎಂದು ಆರೋಪಿಸಿದರು.

ನಮಗೂ ಮೊಟ್ಟೆ ಕೊಟ್ಟಿಲ್ಲ. ಈವರೆಗೆ ಎರಡು ಬಾರಿ ಮಾತ್ರ ಪಡಿತರ ಅಕ್ಕಿ ವಿತರಿಸಲಾಗಿದ್ದು, ನಾವು ಸಹಿ ಹಾಕಿ ಹೋದ ನಂತರ ಎಲ್ಲ ಪಡಿತರ ನೀಡಿದ ಬಗ್ಗೆ ರಿಜಿಸ್ಟರ್ ಬರೆಯಲಾಗಿದೆ ಎಂದು ಬಾಲಿಗದ್ದೆಯ ಶ್ರೀಮತಿ ಸಿದ್ದಿ, ಲಕ್ಷ್ಮೀ ಸಿದ್ದಿ, ಖತಿಜಾ ಶೇಖ್ ಅವರು ದೂರಿದರು.

ಇಲ್ಲಿ ಬಾಲವಿಕಾಸ ಸಮಿತಿ ಇರಬೇಕಾಗಿದ್ದರೂ ಅದನ್ನು ರಚಿಸಿಯೇ ಇಲ್ಲ ಎನ್ನಲಾಗಿದೆ. ಸ್ಥಳೀಯ ಗ್ರಾಪಂ ಸದಸ್ಯರೊಬ್ಬರ ಹೆಸರಿನಲ್ಲಿ ಕೆಲ ವ್ಯವಹಾರಗಳಿರುವ ಬಗ್ಗೆಯೂ ಊರಿನವರು ಅನುಮಾನ ವ್ಯಕ್ತಪಡಿಸಿದರು.ಕಾರ್ಯಕರ್ತೆಗೆ ನೋಟಿಸ್: ಗ್ರಾಮಸ್ಥರ ದೂರಿನಂತೆ ತಾಲೂಕಿನ ತಟಗಾರದ ಅಂಗನವಾಡಿಯಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳುತ್ತೇವೆ. ಕಾರ್ಯಕರ್ತೆಗೆ ನೋಟಿಸ್ ಜಾರಿ ಮಾಡುತ್ತೇವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್‌ ತಿಳಿಸಿದರು.

Share this article