ಶಿಕ್ಷಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿ ವಂಚನೆ: ಬಿ.ಎನ್.ರಾಜು

KannadaprabhaNewsNetwork | Published : Feb 17, 2025 12:34 AM

ಸಾರಾಂಶ

ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಅವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸುತ್ತಿರುವ ಘಟನೆ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನಡೆಯುತ್ತಿದೆ.

ಕ್ರಮಕ್ಕೆ ಆಗ್ರಹಿಸಿ ಫೆ.೧೭ರಂದು ಬಿಇಒ ಕಚೇರಿ ಮುಂಭಾಗ ಮಾನವ ಹಕ್ಕುಗಳ ಸಮಿತಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಭದ್ರಾವತಿ

ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಅವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸುತ್ತಿರುವ ಘಟನೆ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಫೆ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ತಿಳಿಸಿದರು.

ನಗರದಲ್ಲಿ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಉಚಿತ ಶಿಕ್ಷಣ ಕಡ್ಡಾಯ ಮಾಡಿದ್ದರೂ ಸರ್ಕಾರಿ ಶಾಲಾ-ಕಾಲೇಜುಗಳು ದುಸ್ಥಿತಿಗೊಂಡು, ಖಾಸಗಿ ಶಾಲಾ-ಕಾಲೇಜುಗಳು ನಿಯಮ ಮೀರಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಕ್ರಮ ಸಮಿತಿ ಖಂಡಿಸುತ್ತದೆ ಎಂದರು.

ದೇಶದಲ್ಲಿ ಶಿಕ್ಷಣ ವಂಚಿತರಿಗೆ ಕ್ರೈಸ್ತ ಸಮಾಜ ಶಿಕ್ಷಣದ ಸೇವೆ ಮಾಡಿರುವುದು ಅಪಾರವಾದದ್ದು. ದೀನ ದಲಿತರಿಗೆ ಸೇವೆ ಸಲ್ಲಿಸಿದ, ಕುಷ್ಠರೋಗಿಗಳ ಸೇವೆ ಮಾಡಿದ ಮದರ್ ತೆರೇಸಾರವರ ಮಾನವೀಯತೆ ಮರೆಯುವಂತದ್ದಲ್ಲ. ಆದರೆ ನಗರದ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಅನ್ಯಾಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಹೈಸ್ಕೂಲ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದರು.

ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸದಸ್ಯರಾದ ವಿನ್ನಿ ಡಿಸೋಜಾ ಕೋಂ ಲಿಗೋರಿಯಾ ಎಂಬುವರು ಕಳೆದ ೧೭ ವರ್ಷಗಳಿಂದ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸಮ್ಮುಖದಲ್ಲಿರುವ ಕರುಣ ಸೇವಾ ಕೇಂದ್ರ ಮತ್ತು ಕರುಣ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಇವರ ಪಿ.ಎಫ್ ಹಣ ಹೈಸ್ಕೂಲ್ ಮತ್ತು ಸೊಸೈಟಿ ಆಫ್ ದ ಸಿಸ್ಟರ್ ಆಫ್ ಎಸ್.ಟಿ ಚಾರ್ಲ್ಸ್ ಹೆಸರಿನಲ್ಲಿ ಶಿವಮೊಗ್ಗದ ಪಿಎಫ್ ಕಚೇರಿಯಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಅಲ್ಲದೆ ಇವರ ವೇತನ ಪ್ರತಿ ತಿಂಗಳು ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದ ಸಿಸ್ಟರ್ ಹೆಲೆನ್ ಮೊರಾಸ್‌ರವರು ಇವರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ವಿನ್ನಿ ಡಿಸೋಜಾರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಸ್ಕೂಲ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಸುಳ್ಳು ಮಾಹಿತಿ ನೀಡಲಾಗಿದೆ. ವಿನ್ನಿ ಡಿಸೋಜಾರವರು ಸ್ಕೂಲ್ ಅಥವಾ ಸೇವಾ ಕೇಂದ್ರ ಅಥವಾ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದಿಲ್ಲ. ಈ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಾರ್ಮಿಕ ಇಲಾಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸ್ಕೂಲ್ ನೋಂದಣಿ ರದ್ದುಗೊಳಿಸಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.

ಟಿ.ಜಿ ಬಸವರಾಜಯ್ಯ, ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಸೀನಪ್ಪ, ವಿನ್ನಿ ಡಿಸೋಜಾ, ಮೇರಿಯಮ್ಮ, ಗ್ರೇಸಿ ಇದ್ದರು.

Share this article