ಕನ್ನಡಪ್ರಭ ವಾರ್ತೆ ಶೃಂಗೇರಿ
ರಾಜ್ಯವು 4 ಲಕ್ಷದ 30 ಸಾವಿರ ಕೋಟಿ ರು.ಹಣವನ್ನು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ 60 ಸಾವಿರ ಕೋಟಿ ಮಾತ್ರ ವಾಪಸ್ ನೀಡುತ್ತಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಂದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಅವರು ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ದರು.ನಮ್ಮ ರಾಜ್ಯ ಅತ್ಯದಿಕ ತೆರಿಗೆ ಕಟ್ಟುವ ದೇಶದ ಎರಡನೇ ರಾಜ್ಯವಾಗಿದೆ.ಕೇಂದ್ರ ಸರ್ಕಾರವು ನಮ್ಮ ರಾಜ್ಯದ ವಿಷಯದಲ್ಲಿ ಮಲತಾಯಿತಿ ಧೋರಣೆ ಅನುಸರಿಸುತ್ತಿದೆ.
ನಾವೇ ಕಟ್ಟಿದ ತೆರಿಗೆ ಹಣವನ್ನು ನಮಗೆ ವಾಪಸ್ಸು ನೀಡುತ್ತಿಲ್ಲ.ಸರಿಯಾಗಿ ಅನುದಾನ ನೀಡುತ್ತಿಲ್ಲ.ರಾಜ್ಯದ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.ಯಾವುದೇ ಸರ್ಕಾರ ಬಂದರೂ ತೆರಿಗೆಯ ಹಣದಿಂದಲೇ ಅಭಿವೃದ್ದಿ ಕೆಲಸ ಮಾಡುವುದು.ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವರು ಸರ್ಕಾರದ ತೆರಿಗೆಯ ಹಣದಿಂದ ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ ಎಂದು ಆರೋಪ ಮಾಡುತ್ಚಿದ್ದಾರೆ.
ಪಕ್ಷವು ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದಿದೆ, ನಡೆಯುತ್ತಿದೆ. ಕೇಂದ್ರ ಸರ್ಕಾರದ ಬೆಲೆಯೇರಿಕೆ ಬಿಸಿಯಿಂದ ತತ್ತರಿಸಿದ ಜನರಿಗೆ 5 ಯೋಜನೆಗಳ ಮೂಲಕ ಆರ್ಥಿಕವಾಗಿ ಶಕ್ತಿ ತುಂಬಿದೆ.
ಹಸಿವು ಮುಕ್ತ ಕರ್ನಾಟಕ ಉದ್ದೇಶದಿಂದ ಪ್ರತಿ ಕುಟುಂಬದ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡುತ್ತಿದೆ.ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿ ನೀಡಿ ಎಂದು ಹಣ ನೀಡಿದರೂ ಅಕ್ಕಿ ನೀಡದೇ ದ್ವೇಷದ ರಾಜಕಾರಣ ಮಾಡಿದೆ.
ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಹಣ ನೀಡುತ್ತಿದೆ. ಪ್ರತಿ ಕುಂಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರು. ಹಣ ನೀಡುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಯುವನಿಧಿ ಯೋಜನೆಯಡಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ನೀಡುತ್ತಿದೆ.
ಹೀಗೆ ರಾಜ್ಯದ ಅಭಿವೃದ್ಧಿ ಮಾಡುತ್ತಿದೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಉತ್ತಮ ಜನಪರ ಆಡಳಿತ ನಡೆಯುತ್ತಿದೆ. ಶೃಂಗೇರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ರಸ್ತೆ, ಸೇತುವೆ, ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕೇಂದ್ರ ಸರ್ಕರದಿಂದ ಅಗತ್ಯ ಅನುದಾನಗಳು ಬಂದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆಯಾಗಲು ವಿಳಂಬವಾಗಿದೆ. ಅವರಿ ಸೂಕ್ತ ಸಮಯದಲ್ಲಿ ಪರಿಹಾರ ಬಿಡುಗಡೆಯಾಗಬೇಕು.
ಅರಣ್ಯ ಇಲಾಖೆಯ ಅಧಿಕಾರಿಗಳು ಮನೆಕಟ್ಟಿಕೊಡು ವಾಸಮಾಡುತ್ತಿರುವ ಜನರಿಗೆ ತೊಂದರೆ ನೀಡಬಾರದು. ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ನೋಡಲು ಸಾಧ್ಯವಿಲ್ಲ. ಮಾನವೀಯ ದೃಷ್ಟಿಯಿಂದ ನೋಡಬೇಕು. ಜನರ ಬದುಕು ಮುಖ್ಯ.ಕಂದಾಯ ಇಲಾಖೆ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಬೇಕು ಎಂದರು.
ತಹಸಿಲ್ದಾರ್ ಗೌರಮ್ಮ, ತಾಲೂಕು ಪಂಚಾಯಿತಿ ಎಡಿ ಸುದೀಪ್, ಕೂತಗೋಡು ಪಂಚಾಯಿತಿ ಅಧ್ಯಕ್ಷ ನಾಗೇಶ್ , ಮರ್ಕಲ್ ಪಂಚಾಯಿತಿ ಅಧ್ಯಕ್ಷ ಮಹೇಶ್, ಮೆಣಸೆ ಪಂಚಾಯಿತಿ ಅಧ್ಯಕ್ಷೆ ಸಂಧ್ಯ, ನೆಮ್ಮಾರು ಪಂಚಾಯಿತಿ ಅಧ್ಯಕ್ಷೆ ಗಿರಿಜಾ, ಧರೆ ಪಂಚಾಯಿತಿ ಅಧ್ಯಕ್ಷೆ ರಂಜಿತಾ, ವಿವಿಧ ಪಂಚಾಯಿತಿಗಳ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.