ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಗ್ರಾಹಕರ ಕ್ಲಬ್ 2023-24 ನೇ ಸಾಲಿನ ಗ್ರಾಹಕರ ರಕ್ಷಣೆ ನಮ್ಮೆಲ್ಲರ ಹೊಣೆ ಸಮಾರೋಪ ಸಮಾರಂಭ ಮತ್ತು ತಂಬಾಕು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಅರಿವು ಕಾರ್ಯಕ್ರಮ ನಡೆಯಿತು.ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಂಡ್ಯಯಿಂದ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಬಿ.ಎಸ್.ಮಹೇಶ್ ಕುಮಾರ್ ಮಾತನಾಡಿ, ಮನುಷ್ಯ ದುರಾಸೆ ಪ್ರವೃತ್ತಿ ಉಳ್ಳವನಾಗಿದ್ದು, ಲಾಭದ ಉದ್ದೇಶದಿಂದ ಅಂಗಡಿ, ಮಳಿಗೆ, ಮಾರುಕಟ್ಟೆಗಳಲ್ಲಿ ಅಳತೆ ಮತ್ತು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂದರು.
ಗುಣಮಟ್ಟದ ವಸ್ತುಗಳನ್ನು ನೀಡದೇ ಗ್ರಾಹಕರಿಗೆ ವಂಚಿಸಲಾಗುತ್ತಿದೆ. ತಿಂಡಿ ತಿನಿಸುಗಳನ್ನು ಕಲಬೆರಕೆ ಮಾಡುವ ಜೊತೆಗೆ ಹೆಚ್ಚು ಬೆಲೆ ಪಡೆದು ಕಡಿಮೆ ಉತ್ಪನ್ನ ನೀಡುತಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ದೈನಂದಿನ ವ್ಯವಹಾರದಲ್ಲಿ ಖರೀದಿ ಮಾಡುವಾಗ ಅಳತೆ ಮತ್ತು ಪ್ರಮಾಣ ಕುರಿತು ಗಮನಿಸಬೇಕು. ಈ ರೀತಿಯ ಘಟನೆಗಳು ಕಂಡು ಬಂದರೇ ಗ್ರಾಹಕ ರಕ್ಷಣಾ ವೇದಿಕೆಯ ಗಮನಕ್ಕೆ ತಂದು ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಮುಖ್ಯ ಶಿಕ್ಷಕಿ ಶಕುಂತಲಾ ಮಾತನಾಡಿ, ತಂಬಾಕು ಬಳಕೆಯಿಂದ ಹಲವು ಮನುಷ್ಯರಲ್ಲಿ ಕಾಯಿಲೆಗಳು ಬಾಧಿಸಲಿವೆ. ಶ್ವಾಸಕೋಶ ಮಾತ್ರವಲ್ಲದೇ ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಅದು ಮಾರಕ ಪರಿಣಾಮ ಉಂಟು ಮಾಡುತ್ತದೆ. ತಂಬಾಕು ಚಟಕ್ಕೆ ಜೋತು ಬಿದ್ದು ಬಹುಬೇಗ ಸಾವು ತಂದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ತಂಬಾಕು ಬಳಕೆ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಭವ್ಯ ಭಾರತ ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.ಪ್ರಬಂಧ ಸ್ಪರ್ಧೆಯಲ್ಲಿ ಭವಾನಿ, ನಿವೇದಿತಾ, ಪ್ರಮೋದ್ ಪಾಟೀಲ್ ಬಹುಮಾನ ಪಡೆದರೆ, ಚರ್ಚಾ ಸ್ಪರ್ಧೆಯಲ್ಲಿ ಪೂಜಾ, ಐಶ್ವರ್ಯಾ, ಲಾವಣ್ಯ, ಅಶು ಭಾಷಣ ಸ್ಪರ್ಧೆಯಲ್ಲಿ ಬಿಂದು, ಪಂಕಜ್ ಗೌಡ, ಇಂದೂ, ರಸಪ್ರಶ್ನೆ ಸ್ಪರ್ಧೆಯಲ್ಲಿ ಪೂಜಾ ಮತ್ತು ತಂಡ, ಲಕ್ಷ್ಮೀ ಶ್ರೀ, ಚಂದನ, ಚಿತ್ರಕಲೆ ಸ್ಪರ್ಧೆಯಲ್ಲಿ ಲಕ್ಷ್ಮೀ ಪ್ರಸಾದ್, ಲಾವಣ್ಯ, ಹೇಮಲತಾ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡರು.
ಈ ವೇಳೆ ಶಿಕ್ಷಕರಾದ ಸಿದ್ದರಾಜು, ನಿಂಗೇಗೌಡ, ರಾಧ, ಸ್ವರ್ಣಲತಾ, ರಿಷಿದಾ ಖಾನ್, ಕಾವ್ಯ, ಸೌಜನ್ಯ, ಶಿವಣ್ಣ, ಗ್ರಾಹಕ ಕ್ಲಬ್ ಅಧ್ಯಕ್ಷ ಪಂಕಜ್ ಗೌಡ, ಕಾರ್ಯದರ್ಶಿ ಲಕ್ಷ್ಮೀ ಪ್ರಸಾದ್, ಖಜಾಂಚಿ ಐಶ್ವರ್ಯ ಹಾಗೂ ಮತ್ತಿರರಿದ್ದರು.