ಕನ್ನಡಪ್ರಭ ವಾರ್ತೆ ಬಂಟ್ವಾಳಎಲ್ಲದಕ್ಕೂ ದುಪ್ಪಟ್ಟು ತೆರಿಗೆ ವಿಧಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ , ಗ್ಯಾರಂಟಿ ಯೋಜನಗೆಳ ಹೆಸರಿನಲ್ಲಿ ವಂಚಿಸುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಆರೋಪಿಸಿದ್ದಾರೆ. ಬಂಟ್ವಾಳದ ಸ್ಪರ್ಶಕಲಾಮಂದಿರದಲ್ಲಿ ಗುರುವಾರ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, 23ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಪಂಚಾಯಿತಿಯಲ್ಲಿ ಹೋರಾಟ ನಡೆಯಲಿದೆ ಎಂದರು. ಪಕ್ಷದ ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗವಹಿಸಬೇಕು ಎನ್ನುವ ಸೂಚನೆ ಇದ್ದು, ಪಕ್ಷ ನೀಡಿದ ಸೂಚನೆಯಂತೆ ರಾಯಿ ಗ್ರಾಮದಲ್ಲಿ ಹೋರಾಟಕ್ಕೆ ಕುಳಿತುಕೊಳ್ಳುವೆ ಎಂದರು. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ನೀಡಿದ ಜವಾಬ್ದಾರಿ ಹಾಗೂ ಸೂಚನೆ ಪಾಲಿಸುತ್ತೇನೆ ಎಂದು ಅವರು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ವಸೂಲಿಬಾಜಿ ಸರ್ಕಾರವಿದ್ದು, ಬಂಟ್ವಾಳ ಕ್ಷೇತ್ರದಲ್ಲಿ 7743 ಮಂದಿಗೆ ಪಿಂಚಣಿ ಯೋಜನೆಯ ರದ್ದತಿಗೆ ನೋಟೀಸ್ ಜಾರಿ ಮಾಡಲಾಗಿದೆ, ಜನರ ಹಿತ ಮರೆತು ಮಲಗಿರುವ ಸರಕಾರವನ್ನು ಎಬ್ಬಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.