ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಲು ಕಾನೂನು ಮಾಪನ ಇಲಾಖೆ ಶೀಲ್ ಹಾಳು ಮಾಡಿದ ಹಿನ್ನೆಲೆ ಪಟ್ಟಣದ ಆವಿನಹಳ್ಳಿ ರಸ್ತೆಯಲ್ಲಿರುವ ಗ್ಯಾಸ್ ಬಂಕ್‌ನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ
ಸಾಗರ: ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಲು ಕಾನೂನು ಮಾಪನ ಇಲಾಖೆ ಶೀಲ್ ಹಾಳು ಮಾಡಿದ ಹಿನ್ನೆಲೆ ಪಟ್ಟಣದ ಆವಿನಹಳ್ಳಿ ರಸ್ತೆಯಲ್ಲಿರುವ ಗ್ಯಾಸ್ ಬಂಕ್‌ನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ. ಗೋಗ್ಯಾಸ್ ಎಲ್‌ಪಿಜಿ ಕಂಪನಿ ಮಾಲೀಕತ್ವದ ಸ್ಥಳೀಯ ಶಾಖಾ ಘಟಕವನ್ನು ಶಿವಮೊಗ್ಗದ ಎಂ.ಆರ್.ಮಹೇಶ್ವರಪ್ಪ ಎಂಬುವವರಿಗೆ ನಡೆಸಲು ಗುತ್ತಿಗೆ ನೀಡಲಾಗಿತ್ತು. ಘಟಕದಲ್ಲಿನ ಮದರ್ ಬೋರ್ಡ್‌ಅನ್ನು ಅಳತೆ ನಿಖರತೆ ಕಾಪಾಡುವ ಸಲುವಾಗಿ ನಿಯಮಿತ ಅವಧಿಯವರೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಪರಿಶೀಲನೆ ನಡೆಸಿ ಅದನ್ನು ಶೀಲ್ ಮಾಡುವ ನಿಯಮ ಚಾಲ್ತಿಯಲ್ಲಿದೆ. ಮಹೇಶ್ವರಪ್ಪ ಅವರು ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದ ಈ ಶೀಲ್‌ನ್ನು ಒಡೆದು ಪ್ರತ್ಯೇಕ ಮದರ್ ಬೋರ್ಡ್ ಅಳವಡಿಸಿರುವುದು ಕಂಪನಿ ಗಮನಕ್ಕೆ ಬಂದಿತ್ತು.
ಕಳೆದ ಜು.೫ರಂದು ಗೋಗ್ಯಾಸ್ ಕಂಪನಿ ವಿಚಕ್ಷಣ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಕಾನೂನುಬಾಹಿರ ಕೃತ್ಯ ಬೆಳಕಿಗೆ ಬಂದಿದೆ. ಈ ವೇಳೆ ಮಹೇಶ್ವರಪ್ಪ ಸ್ಥಳದಿಂದ ಪರಾರಿಯಾಗಿದ್ದಾರೆ. ಗೋಗ್ಯಾಸ್ ಕಂಪನಿ ಈ ಸಂಬಂಧ ಶಿವಮೊಗ್ಗದ ಕಾನೂನು ಇಲಾಖೆಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಇಲಾಖೆ ಸಹಾಯಕ ನಿಯಂತ್ರಕ ರಾಜು ಎಚ್.ಎಸ್. ಹಾಗೂ ಸಿಬ್ಬಂದಿ ವರ್ಗದವರು ಮಹಜರ್ ಕ್ರಮ ಜರುಗಿಸಿ ಬಂಕ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಗ್ರಾಹಕರಿಗೆ ವಂಚಿಸಿದ ಆರೋಪದ ಮೇರೆಗೆ ಎಂ.ಆರ್.ಮಹೇಶ್ವರಪ್ಪ ವಿರುದ್ಧ ಪೇಟೆಪೊಲೀಸ್ ಠಾಣೆಯಲ್ಲಿ ಕಾನೂನು ಮಾಪನ ಕಾಯ್ದೆ ಕಲಂ ೨೬ ರಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.