ಪುಸ್ತಕಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಬೇಡ; ಓದುವ ಕ್ರಾಂತಿಯಾಗಬೇಕು

KannadaprabhaNewsNetwork |  
Published : Jun 25, 2025, 11:47 PM IST
1 | Kannada Prabha

ಸಾರಾಂಶ

ಇಂದು ಪುಸ್ತಕ ಸಂಸ್ಕೃತಿ ಕುಗ್ಗುತ್ತಿದೆ. ಪುಸ್ತಕ ಸಂಸ್ಕೃತಿಯ ಮಾಧುರ್ಯ ಸಪ್ಪೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪುಸ್ತಕಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಬೇಡ. ಪುಸ್ತಕ ಯೋಗ ಎಲ್ಲಕ್ಕಿಂತ ದೊಡ್ಡ ಯೋಗ. ಈಗ ಪುಸ್ತಕ ಯಜ್ಞ ನಡೆಯಬೇಕಿದೆ. ಅದರಂತೆ ಓದುವ ಕ್ರಾಂತಿಯಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಮಂಗಳವಾರ ಆಯೋಜಿಸಿದ್ದ ಶಾಲಾ ಕಾಲೇಜಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಇಂದು ಪುಸ್ತಕ ಸಂಸ್ಕೃತಿ ಕುಗ್ಗುತ್ತಿದೆ. ಪುಸ್ತಕ ಸಂಸ್ಕೃತಿಯ ಮಾಧುರ್ಯ ಸಪ್ಪೆಯಾಗುತ್ತಿದೆ. ಅದರ ಬೆಳಕು ಮಬ್ಬಾಗುತ್ತಿದೆ. ಈ ಬದಲಾವಣೆಗೆ ಸಾಮಾಜಿಕ ಜಾಲತಾಣಗಳ ಹಾವಳಿ, ಮೊಬೈಲ್ ಕಾರಣವಾಗಿದೆ. ಪುಸ್ತಕ ಸಂಸ್ಕೃತಿ ಭುವನದ ಭಾಗ್ಯ ಮಾತ್ರವಲ್ಲ, ಭವನದ ಭಾಗ್ಯವೂ ಆಗಬೇಕು ಎಂದರು.

ಮನೆಗೊಂದು ಗ್ರಂಥಾಲಯ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ಅವರೊಬ್ಬ ಪುಸ್ತಕ ದೈತ್ಯ. ಅವರನ್ನು ನಾವೆಲ್ಲರೂ ಆದರ್ಶವಾಗಿ ಇಟ್ಟುಕೊಳ್ಳಬೇಕು. ಅವರು ಪುಸ್ತಕಗಳನ್ನು ಓದುವಾಗ ತಲೆತಗ್ಗಿಸಿ ಓದಬೇಕು ಏಕೆಂದರೆ ಅದು ತಲೆ ಎತ್ತಿ ನಡೆಯಲು ಅವಕಾಶ ಕಲ್ಪಿಸುತ್ತದೆ ಎಂದಿರುವುದು ಅಕ್ಷರಶಃ ಸತ್ಯ ಎಂದು ಅವರು ಹೇಳಿದರು.

ಮನೆಗೊಂದು ಗ್ರಂಥಾಲಯ

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಮನೆಗೆ ಅರಿಶಿನ, ಕುಂಕುಮ, ಅಗರಭತ್ತಿ ತೆಗೆದುಕೊಂಡು ಹೋಗುವ ಹಾಗೆ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ತೆರೆದರೆ ಹಂತ, ಹಂತವಾಗಿ ಓದುವ ಅಭ್ಯಾಸ ಬರುತ್ತದೆ. ಪ್ರಾಧಿಕಾರದಿಂದ ಒಂದು ಲಕ್ಷ ಮನೆಯಲ್ಲಿ ಒಂದು ಗ್ರಂಥಾಲಯ ಮಾಡಿಸುವ ಆಲೋಚನೆ ಇದೆ ಎಂದರು.

ಮನೆಗೆ 500 ಪುಸ್ತಕಗಳು ಬಂದರೆ 5 ಕೋಟಿ ಪುಸ್ತಕಗಳು ಪ್ರಿಂಟ್ ಆಗುತ್ತದೆ. ಇದ್ದರಿಂದ ಪ್ರಕಾಶಕರಿಗೆ, ಲೇಖಕರಿಗೆ, ಡಿಟಿಪಿ, ಪ್ರಿಂಟಿಗ್ ಪ್ರೆಸ್ ಇವರೆಲ್ಲರಿಗೂ ಇದರಿಂದ ಜೀವನ ನಡೆಯುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ಮನೆಯಲ್ಲಿ ಗ್ರಂಥಾಲಯ ತರೆದು ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ನಮ್ಮ ಮನೆಯಲ್ಲಿ ಗ್ರಂಥಾಲಯ ಆರಂಭಿಸೋಣ. ಉತ್ತಮ ಗ್ರಂಥಾಲಯ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರುಗಳಿಗೆ ಪುಸ್ತಕವನ್ನು ವಿತರಿಸಲಾಯಿತು. ನಂತರ ಗ್ರಂಥಾಲಯ ಜಾಗೃತ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಿ, ನೇಮಕಾತಿ ಪತ್ರ ವಿತರಿಸಲಾಯಿತು. ಪತ್ರಕರ್ತರ ಸಂಘಕ್ಕೂ ಪುಸ್ತಕಗಳನ್ನು ನೀಡಲಾಯಿತು.

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಎನ್. ಕರಿಯಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮೊದಲಾದವರು ಇದ್ದರು.

----

ಕೋಟ್...

ತಂತ್ರಜ್ಞಾನ ಮುಂದುವರಿದಂತೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕಗಳು ನಮ್ಮ ಬದುಕಿಗೆ ಆದ್ಯತೆ ಅಲ್ಲ. ಬದಲಿಗೆ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು. ಕೈಯ್ಯಲ್ಲಿ ಜ್ಞಾನದ ಪ್ರತೀಕವಾದ ಒಂದು ಪುಸ್ತಕ ಇರಬೇಕು. ಇಲ್ಲದಿದ್ದರೆ, ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನವೇ ಬೇರೆಯದ್ದೇ ಆಗಿರುತ್ತದೆ.

- ಮಾನಸ, ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ