ಯುವ ಪೀಳಿಗೆ ಸೃಷ್ಟಿಸುವ ಮತ್ತು ದೇಶದ ಭವಿಷ್ಯ ರೂಪಿಸುವ ಅದ್ಭುತ ಶಕ್ತಿ ಶಿಕ್ಷಕರಿಗೆ ಇದೆ
ಹರಪನಹಳ್ಳಿ: ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹರಪನಹಳ್ಳಿ ಸೇರಿದಂತೆ ಎಲ್ಲ ತಾಲೂಕಿನ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗಳನ್ನು ಮುಂದಿನ ತಿಂಗಳು ಉಚಿತವಾಗಿ ದೆಹಲಿ ಪ್ರವಾಸಕ್ಕೆ ಕಳಿಸಿಕೊಡಲಾಗುವುದು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.
ಅವರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯುವ ಪೀಳಿಗೆ ಸೃಷ್ಟಿಸುವ ಮತ್ತು ದೇಶದ ಭವಿಷ್ಯ ರೂಪಿಸುವ ಅದ್ಭುತ ಶಕ್ತಿ ಶಿಕ್ಷಕರಿಗೆ ಇದೆ, ಶಿಕ್ಷಕರು ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವವರಲ್ಲ, ಬದಲಿಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಸಮಾಜದ ಜವಾಬ್ದಾರಿ ಬಿತ್ತುವ ಶಿಲ್ಪಿಗಳು ಎಂದು ಪ್ರಶಂಸಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮರಳಿನಲ್ಲಿ ಅಕ್ಷರ ಅಭ್ಯಾಸದ ಮೂಲಕ ಆರಂಭವಾದ ಶಿಕ್ಷಣ ಪದ್ಧತಿ ಇಂದು ಉನ್ನತ ಸ್ಥಾನಕ್ಕೆ ತಲುಪಿದೆ, ಆಧುನಿಕ ಯುಗಕ್ಕೆ ತಕ್ಕಂತೆ ಶಿಕ್ಷಣ ಬದಲಾಗುತ್ತಾ ಹೋಗುತ್ತಿದೆ ಎಂದು ಹೇಳಿದರು.
ತಾಲೂಕಿನಲ್ಲಿರುವ 54 ಸಾವಿರ ಮಕ್ಕಳಿಗೂ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯ ರೂಪಿಸಬೇಕು ಎಂದ ಅವರು, ಮುಂದಿನ ಬಾರಿ ಶಿಕ್ಷಕರ ದಿನಾಚರಣೆಗೆ ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಿಕೊಂಡು ಬರಬೇಕು, ಗಂಡು ಹೆಣ್ಣು ಎಂಬ ಭೇದ ಮಾಡದೇ ಎಲ್ಲರೂ ಒಂದಾಗಿ ಶಿಕ್ಷಕರ ದಿನಾಚರಣೆ ಆಚರಿಸಬೇಕು ಎಂದು ಸಲಹೆ ನೀಡಿದರು.
ತಾಪಂ ಇಒ ವೈ.ಎಚ್. ಚಂದ್ರಶೇಖರ ಮಾತನಾಡಿ, ಶಿಕ್ಷಣ ವ್ಯವಸ್ಥೆ ಬದಲಾವಣೆ ತರುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲಿ ಮಕ್ಕಳನ್ನು ತಯಾರು ಮಾಡಬೇಕು, ಶಿಕ್ಷಕ ವೃತ್ತಿ ಪಾವಿತ್ರತೆ ಪ್ರತಿಯೊಬ್ಬರೂ ಕಾಪಾಡಬೇಕು ಎಂದು ಹೇಳಿದರು.
ವಿಬಿಜಿ ರಾಮ್ ಜಿ ಯೋಜನೆಯಡಿ ತಾಲೂಕಿನಲ್ಲಿ 175 ಶಾಲಾ ಶೌಚಾಲಯ, 65 ಅಡುಗೆ ಕೋಣೆ ಮತ್ತು 68 ಶಾಲಾ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಮಾಜವನ್ನು ಸರಿದಾರಿಗೆ ತರುವಲ್ಲಿ ಮತ್ತು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಮಾತನಾಡಿ, ಮಕ್ಕಳಲ್ಲಿ ಸಮಾನತೆ, ಸಂವಿಧಾನದ ಆಶಯ ಮತ್ತು ವೈಚಾರಿಕತೆ ಪ್ರಜ್ಞೆ ಮೂಡಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ, ಶಾಸಕರು ಸಹ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಮಕ್ಕಳ ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗುವುದು ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಾಟಿ ದಾದಪೀರ್, ಮೈದೂರು ರಾಮಣ್ಣ, ದೇವೇಂದ್ರಗೌಡ, ರೆಡ್ಡಿ ಶಾಂತಕುಮಾರ, ಟಿಪಿಒ ಕೆ. ಷಣ್ಮುಖಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ, ಬಿಆರ್ ಸಿ ಹೊನ್ನತ್ತೇಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ ಜೈನ್, ಜಿಲ್ಲಾ ಸಹ ಕಾರ್ಯದರ್ಶಿ ಬಿ. ರಾಜಶೇಖರ, ತಾಲೂಕು ಕಾರ್ಯದರ್ಶಿ ಎಂ.ರಮೇಶ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್. ರಾಮಪ್ಪ, ಕೆ.ಜಿ. ಶಿವಕುಮಾರ್, ಕಾಟೆ ಹನುಮಂತಪ್ಪ, ಬಿ. ಚಂದ್ರಮೌಳಿ, ಕೃಷ್ಣನಾಯ್ಕ್, ಜಿ. ಪದ್ಮಲತಾ, ಸೊಪ್ಪಿನ ಹನುಮಂತಪ್ಪ, ಮನ್ಸೂರ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.