ತಾಲೂಕಿನ ಬಡ ಕುಟುಂಬಗಳ ವೃದ್ಧರಿಗೆ ಕಣ್ಣಿನ ಉಚಿತ ತಪಾಸಣೆ

KannadaprabhaNewsNetwork | Published : Apr 12, 2025 12:49 AM

ಸಾರಾಂಶ

ಬಡವರ ಕಣ್ಣಿಗೆ ಬೆಳಕನ್ನು ನೀಡುವುದು ಅತ್ಯುತ್ತಮ ಕಾರ್ಯ. ಇಂತಹ ಸಮಾಜಮುಖಿ ಚಿಂತನೆಯೊಂದಿಗೆ ಉಚಿತ ತಪಾಸಣಾ ಶಿಬಿರವನ್ನು ಪ್ರತಿವಾರ ಏರ್ಪಡಿಸಲು ಸಿದ್ಧಗೊಂಡಿರುವ ಆರ್. ಉಗ್ರೇಶ್ ಅಭಿಮಾನಿಗಳ ಸೇವೆ ಜನ ಮೆಚ್ಚುವಂತದ್ದು .

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿನ ಬಡ ಕುಟುಂಬಗಳ ವೃದ್ಧರಿಗೆ, ಕಣ್ಣಿನ ಪೊರೆ ಬಂದಿರುವ ನೂರಾರು ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಕಣ್ಣುಗಳನ್ನು ಉಜ್ವಲಗೊಳಿಸುವುದೇ ನಮ್ಮ ಗುರಿ. ಶಿರಾ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜನೆ ಮಾಡಿ ಕಣ್ಣಿಗೆ ಬೆಳಕನ್ನು ನೀಡುವ ಸಂಕಲ್ಪ ನಮ್ಮದಾಗಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೇಶ್ ಹೇಳಿದರು.

ತಾಲೂಕಿನ ಕೊಟ್ಟ ಗ್ರಾಮದಲ್ಲಿ ಆರ್. ಉಗ್ರೇಶ್ ಅಭಿಮಾನಿ ಬಳಗ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜನ್ಮದಿನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಡಂಬರವಾಗಿ ಮಾಡಿ ದುಂದು ವೆಚ್ಚ ಮಾಡುವ ಬದಲು ವೃದ್ಧರ ಕಣ್ಣಿಗೆ ನವ ಚೈತನ್ಯ ನೀಡಿದಾಗ ಅಂತಹ ಸೇವೆ ಜನ ಮಾನಸದಲ್ಲಿ ಉಳಿಯಲಿದೆ. ಕಣ್ಣಿಗೆ ಬೆಳಕು ನೀಡುವ ಸೇವೆ ನನಗೆ ಹೆಚ್ಚು ಸಂತೋಷ ತರುತ್ತದೆ ಎಂದರು.

ಶಿರಾ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ, ಲಯನ್ಸ್ ಕ್ಲಬ್ ಮತ್ತು ಆರ್. ಉಗ್ರೇಶ್ ಅಭಿಮಾನಿಗಳ ಸಹಕಾರದೊಂದಿಗೆ ಹಾಗೂ ನೇತ್ರ ದೀಪ ಕಣ್ಣಿನ ಆಸ್ಪತ್ರೆ ಸಹಕಾರದೊಂದಿಗೆ ಪ್ರತಿವಾರ ಶಿರಾ ತಾಲೂಕಿನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಏರ್ಪಡಿಸುತ್ತೇವೆ. ಆಯ್ಕೆಯಾಗುವ ಫಲಾನುಭವಿಗಳಿಗೆ ತುಮಕೂರಿನಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ, ಚಿಕಿತ್ಸೆ ನಂತರ ಮತ್ತೆ ಆಯಾ ಗ್ರಾಮಗಳಿಗೆ ಕಳುಹಿಸುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಇಂತಹ ಸದಾವಕಾಶವನ್ನು ಕಣ್ಣಿನ ಚಿಕಿತ್ಸೆ ಅಗತ್ಯವಿರುವ ಫಲಾನುಭವಿಗಳು ಬಳಸಿ ಕೊಳ್ಳಬೇಕೆಂದರು.

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್ ಮಾತನಾಡಿ, ಬಡವರ ಕಣ್ಣಿಗೆ ಬೆಳಕನ್ನು ನೀಡುವುದು ಅತ್ಯುತ್ತಮ ಕಾರ್ಯ. ಇಂತಹ ಸಮಾಜಮುಖಿ ಚಿಂತನೆಯೊಂದಿಗೆ ಉಚಿತ ತಪಾಸಣಾ ಶಿಬಿರವನ್ನು ಪ್ರತಿವಾರ ಏರ್ಪಡಿಸಲು ಸಿದ್ಧಗೊಂಡಿರುವ ಆರ್. ಉಗ್ರೇಶ್ ಅಭಿಮಾನಿಗಳ ಸೇವೆ ಜನ ಮೆಚ್ಚುವಂತದ್ದು ಎಂದರು.

ಕೊಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶ್ವತ್ಥ್, ಕೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಸದಸ್ಯ ಲಿಂಗದಹಳ್ಳಿ ರಂಗನಾಥ್, ಮಾಜಿ ಅಧ್ಯಕ್ಷೆ ಶಿವಮ್ಮ ರಾಜಣ್ಣ, ಕೊಟ್ಟ ಶ್ರೀನಿವಾಸ್ ಗೌಡ, ಗ್ರಾಪಂ ಮಾಜಿ ಸದಸ್ಯ ಸಿದ್ದಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಮಂಜುನಾಥ್, ಮುಖಂಡ ಅರೆಹಳ್ಳಿ ಬಾಬು, ಜೆಡಿಎಸ್ ಮಹಿಳಾ ಘಟಕದ ಯಶಸ್ವಿನಿ, ಎಸ್. ಎಸ್. ಮೆಡಿಕಲ್ ನಾಗಣ್ಣ, ರಮೇಶ್, ಲೋಕೇಶ್, ಮೂಳೆತಜ್ಞ ಡಾ. ಭರತ್ ಗೌಡ, ರಂಗಾಪುರ ರಾಮಣ್ಣ, ನಟರಾಜು, ವನಿತಾ, ನೇತ್ರ ದೀಪ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಇದ್ದರು ಹಾಗೂ ಅಕ್ಕ ಪಕ್ಕದ ಗ್ರಾಮದ ನೂರಾರು ಜನ ಕಣ್ಣಿನ ತಪಾಸಣೆಗೆ ಒಳಗಾದರು.

Share this article