ಕನ್ನಡಪ್ರಭ ವಾರ್ತೆ ಶಹಾಪುರ
ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕಣ್ಣುಗಳು ಸೂಕ್ಷ್ಮ ಅಂಗವಾಗಿದ್ದು, ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಉಚಿತ ನೇತ್ರ ಚಿಕಿತ್ಸಾ ಶಿಬಿರ ಬಡ ಜನರಿಗೆ ವರವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್ ಹೇಳಿದರು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಯಾದಗಿರಿ, ತಾಲೂಕು ಆರೋಗ್ಯ ಇಲಾಖೆ ಶಹಾಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ, ಕಣ್ಣಲ್ಲಿ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನಹಿತ ಐ-ಕೇರ್ ಸೆಂಟರ್ ಬೆಂಗಳೂರು, ಹಿಂದೂಪುರ ವತಿಯಿಂದ ಡಾ. ಕೃಷ್ಣ ಮೋಹನ್ ಜಿಂಕಾ ಅವರ ತಂಡದಿಂದ ಎರಡು ದಿನ ಶಿಬಿರ ಹಮ್ಮಿಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯ. ಈ ತಂಡವು 2008ರಿಂದ ಒಂದು ಲಕ್ಷಕ್ಕೂ ಹೆಚ್ಚು ಯಶಸ್ವಿ ನೇತ್ರ ಚಿಕಿತ್ಸೆ ನೆರವೇರಿಸಿದ್ದಾರೆ ಎಂದರು.ನೇತ್ರ ಚಿಕಿತ್ಸಾ ಶಿಬಿರದ ಮುಖ್ಯಸ್ಥ ಡಾ.ಕೃಷ್ಣ ಮೋಹನ್ ಜಿಂಕಾ ಮಾತನಾಡಿ, ಕಾರ್ಯಕ್ರಮದಲ್ಲಿ 1200ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಶನಿವಾರ 250 ರಿಂದ 300 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ, ಉಳಿದವರಿಗೆ ಭಾನುವಾರ ಶಸ್ತ್ರ ಚಿಕಿತ್ಸೆ ಮಾಡಲಾಗುವುದೆಂದು ತಿಳಿಸಿದರು.
ಈ ವೇಳೆ ಜಿಲ್ಲಾ ಆರ್‌ಸಿಎಚ್ ಡಾ.ಮಲ್ಲಪ್ಪ ಸೇರಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.ದುಬಾರಿ ಖರ್ಚು ಮಾಡಿ ಕಣ್ಣಿನ ಆಪರೇಷನ್ ಮಾಡಿಸಿಕೊಳ್ಳುವುದು ನಮ್ಮಂತ ಬಡವರಿಗೆ ಸಾಧ್ಯವಿಲ್ಲ. ಸರ್ಕಾರಿ ದವಖಾನೆಯಲ್ಲಿ ಪುಕ್ಕಟೆಯಾಗಿ ಆಪರೇಷನ್ ಮಾಡಿದ್ದು ಬಡವರಿಗೆ ತುಂಬಾ ಉಪಕಾರವಾಯಿತು.
-ಯಮನಮ್ಮ ಶಿರವಾಳ, ನೇತ್ರ ಚಿಕಿತ್ಸೆಗೆ ಒಳಪಟ್ಟ 72 ವರ್ಷದ ವಯೋ ವೃದ್ಧೆ