ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಮದ್ದೂರು ಕ್ರೀಡಾ ಬಳಗದ ಆವರಣದಲ್ಲಿ ಮಾ.15ರಂದು ಬೃಹತ್ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಾನಸ ವಿದ್ಯಾ ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್ ಗುರುವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಯನ್ಸ್, ಕದಂಬ ಲಯನ್ಸ್ ಸಂಸ್ಥೆ, ಬೆಸಗರಹಳ್ಳಿ ಮಾನಸ ವಿದ್ಯಾ ಸಂಸ್ಥೆ, ವರ್ಧಮಾನ್ ಪ್ಯಾರಾ ಮೆಡಿಕಲ್ ಕಾಲೇಜು, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಒಕ್ಕಲಿಗರ ಸಂಘದ ದಂತ ವೈದ್ಯಕೀಯ ವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಶಿಬಿರವನ್ನು ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಎನ್.ಸುಬ್ರಹ್ಮಣ್ಯ ಹಾಗೂ ಬೆಂಗಳೂರು ಬಿಐಟಿ ಕಾಲೇಜಿನ ಅಧ್ಯಕ್ಷ ಅಶೋಕ್ ಜಯರಾಮ್ ಜಂಟಿ ಚಾಲನೆ ನೀಡಲಿದ್ದಾರೆ ಎಂದರು.
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯುವ ಆರೋಗ್ಯ ಶಿಬಿರದಲ್ಲಿ ಹೃದಯ ರೋಗ ಸಮಸ್ಯೆ, ಜನರಲ್ ಫಿಜಿಷಿಯನ್, ಮೂತ್ರ ರೋಗ ಮತ್ತು ಲೈಂಗಿಕ ಸಮಸ್ಯೆ, ಚರ್ಮರೋಗ, ನರರೋಗ ಮತ್ತು ಬೆನ್ನು ಮೂಳೆ ಸಮಸ್ಯೆ, ಸ್ತ್ರೀರೋಗ, ಕಣ್ಣಿನ ಸಮಸ್ಯೆ, ಮೂಳೆ ಮತ್ತು ಕೀಲುಗಳ, ಶ್ವಾಸಕೋಶ ಮತ್ತು ಉಸಿರಾಟದ,ಕಿವಿ ಮೂಗು ಗಂಟಲು ಸಮಸ್ಯೆ , ಮಕ್ಕಳ ತಜ್ಞರು, ದಂತ ತಪಾಸಣೆ ಮತ್ತು ಚಿಕಿತ್ಸೆ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ, ಇಸಿಜಿ ಪರೀಕ್ಷೆ ಯನ್ನು ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ವಿವರಿಸಿದರು.ಶಿಬಿರದಲ್ಲಿ ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯದ ಹಾಗೂ ಒಕ್ಕಲಿಗರ ಸಂಘದ ದಂತ ವೈದ್ಯಕೀಯ ಕಾಲೇಜಿನ ಖ್ಯಾತ ವೈದ್ಯರು ಪಾಲ್ಗೊಂಡು ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ತಾಲೂಕಿನ ಸಾರ್ವಜನಿಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ತಪಾಸಣೆ ಒಳಗಾಗುವ ರೋಗಿಗಳಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ರಾಮಕೃಷ್ಣೇಗೌಡ, ಕಾರ್ಯದರ್ಶಿ ಸಿದ್ದಯ್ಯ, ಖಜಾಂಚಿ ಪಣೇ ದೊಡ್ಡಿ ಸುಧಾಕರ, ಕದಂಬ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಟಿ.ಅರ್. ಕೆಂಗಲ್ ಗೌಡ, ಮಾನಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಚ್.ಪಿ. ನಾಗರಾಜು, ವರ್ಧಮಾನ್ ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಅವಿನಾಶ್, ಮುಖಂಡರಾದ ಜಿ.ಬಿ.ಸಿದ್ಧರಾಮು, ಎಂ.ಕೆ.ಬಿ ಕ್ರೀಡಾ ಬಳಗದ ವ್ಯವಸ್ಥಾಪಕ ವೀರಪ್ಪ ಇದ್ದರು.